ಜಗತ್ತಲ್ಲಿ ಅತ್ಯಂತ ಸುಂದರವಾದ ಎರಡು ಪದಗಳೆಂದರೆ ಒಂದು “ಪ್ರೀತಿ” ಇನ್ನೊಂದು “ಅಮ್ಮ”. ಈ ಎರಡು ಅಕ್ಷರಗಳ ಅಸಲಿಯತ್ತನ್ನು ವರ್ಣಿಸಿ ಪರಿಪೂರ್ಣವಾಗಿ ಬರೆಯುವ ತಾಕತ್ತು ಯಾವ ಬರಹಗಾರನಿಗೂ ಇಲ್ಲ. ಈ ಎರಡನ್ನೂ ಸೇರಿಸಿ ಬರೆಯಿರಿ; “ಅಮ್ಮನ ಪ್ರೀತಿ”.. ಇದರಂತಹ ಅದ್ಭುತವಾದ ಭಾವ ಮತ್ತೊಂದಿಲ್ಲ. ಈ ವಿಶ್ವದಲ್ಲಿ ತಾಯಿಯ ಪ್ರೀತಿಯಿಂದ ವಂಚಿತರಾದ ಅಸಂಖ್ಯ ಮಂದಿಗೆ ಮಾತ್ರ ಅಮ್ಮನ ಮೌಲ್ಯ ಗೊತ್ತಿರುತ್ತದೆ. ಅಮ್ಮ ಅನ್ನುವ ಜೀವಂತ ಜಗನ್ಮಾತೆಗೆ ಸಾವಿಲ್ಲ. ಅವಳು ಅವಿನಾಶಿ, ಅವಳು ಅಮರ, ಅವಳೇ ಅಂತಿಮ. ಅಮ್ಮ ಅನ್ನುವ ಅನೂಹ್ಯ ಮುಗಿಯದ ಕಥೆಯೊಂದನ್ನು ಚಿತ್ರವಾಗಿಸಿದ್ದ ಕನ್ನಡದ ಭರವಸೆಯ ಸಿನಿ ಕಥೆಗಾರ ರೋಹಿತ್ ಪದಕಿ. ಅಮ್ಮನನ್ನು ಅರ್ಥಮಾಡಿಕೊಳ್ಳಬೇಕಾದವರು ಖಂಡಿತಾ ಮರೆಯದೇ ನೋಡಬೇಕಾಗಿರುವ ಸಿನಿಮಾ “ರತ್ನನ್ ಪ್ರಪಂಚ”.
ಓಟಿಟಿ ವೇದಿಕೆ ಅಮೇಜಾನ್ ಪ್ರೈಂನಲ್ಲಿ ಇದೀಗ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆಗಳನ್ನು ಮತ್ತಷ್ಟು ಕುಹಕಿಗಳ ಹೀಗಳಿಕೆಯನ್ನೂ ಸಮಾನವಾಗಿ ಪಡೆದುಕೊಂಡಿರುವ ರತ್ನನ್ ಪ್ರಪಂಚ ಒಂದು ಮನೋಜ್ಞ ಪ್ರಯತ್ನ. ಇಲ್ಲಿ ಅಮ್ಮ ಅನ್ನುವ ಕಥಾವಸ್ತುವೇ ಚಿತ್ರದ ಗಟ್ಟಿ ತಳಪಾಯ. ಹೆತ್ತಮ್ಮನನ್ನು ಹುಡುಕಿ ಹೊರಡುವ ಯಾತ್ರಿಕ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಾನೆ ಅನ್ನುವುದೇ ಕಥೆಯ ದುರಂತ ಅಂತ್ಯ. ಹಾಗಂತ ಇದು ಟ್ರಾಜಿಡಿ ಎಂಡಿಂಗ್ ಅಲ್ಲ; ಮೊದಲು ಭೌತಿಕವಾಗಿ ಅಮ್ಮನನ್ನು ಅರಸುತ್ತಿದ್ದ ಕಥಾನಾಯಕ ಅಮ್ಮನ ಕ್ಯಾರೆಕ್ಟರ್ ಶಾಶ್ವತವಾಗಿ ಮುಗಿದ ನಂತರ ತನ್ನೊಳಗೆ ಅವಳನ್ನು ಹುದುಗಿಸಿಕೊಳ್ಳುತ್ತಾನೆ. ಯಾಕಂದರೆ ಅವನ ನಿಜವಾದ ಅಸ್ಥಿತ್ವವೇ ಆಗಿದ್ದ ಅಮ್ಮ ಭೌತಿಕವಾಗಿ ಮಾತ್ರ ಮರೆಯಾಗಿರುತ್ತಾಳೆ ವಿನಃ ಭಾವುಕವಾಗಿ ಅಲ್ಲ.
ಇಲ್ಲಿ ಮೂವರು ತಾಯಂದಿರ ಕಥೆಯಿದೆ. ತನ್ನ ಹಡೆದ ತಾಯಿಯನ್ನು ಅರಸಿ ಹೊರಡುವ ರತ್ನನಿಗೆ ಜೀವನದ ಮೌಲ್ಯಗಳು ಅರ್ಥವಾಗುತ್ತದೆ, ಕುಟುಂಬದ ಮಹತ್ವ ಅರಿವಾಗುತ್ತದೆ. ತನ್ನೊಳಗಿನ ಬದಲಾವಣೆಗೆ ಅಮ್ಮನೆಂಬ ಮೂಲನೆಲೆ ಕಾರಣ ಎನ್ನುವುದನ್ನು ಒಪ್ಪಿಕೊಳ್ಳುತ್ತಾನೆ. ಚಿತ್ರದಲ್ಲಿ ತೋರಿಸಲಾದ ಕಥೆಯೊಳಗೆ ಸೇರಿಕೊಂಡಿರುವ ಒಬ್ಬಳು ಅಮ್ಮ ಟ್ರಾನ್ಸ್ಜೆಂಡರ್ ಅಂದರೆ ಮಂಗಳಮುಖಿ; ಪ್ರಜ್ಞಾವಂತ ಸಮಾಜದ ಬಹಿಷ್ಕೃತೆ ಅಮ್ಮ ಕಾರುಣ್ಯದ ಕಡಲು. ರತ್ನನ ಪ್ರಪಂಚಕ್ಕೆ ಬರುವ ಇನ್ನೊಬ್ಬಳು ಅಮ್ಮ, ಮಗನಲ್ಲಿ ತನ್ನತನವನ್ನು ಧಾರೆ ಎರೆದವಳು. ಆ ಮಗ ತನ್ನಮ್ಮ ತನ್ನ ದೇವತೆ ಎಂದುಕೊಳ್ಳುತ್ತಾನೆ. ಅವನ ಸತ್ಯವನ್ನು ಭ್ರಮೆಯಾಗಿಸುವ ಸನ್ನಿವೇಶ ಎದುರಾಗುತ್ತದೆ. ಆದರೆ ವಾಸ್ತವದ ಸತ್ಯ ಯಾವುದು ಭ್ರಮೆ ಯಾವುದು ಎಂದು ಅರ್ಥ ಮಾಡಿಕೊಳ್ಳುವ ಮಗ, ತನಗೊಂದು ಅಸ್ಥಿತ್ವ ಕೊಟ್ಟವಳೇ ತನ್ನಮ್ಮ; ಕೇವಲ ಹೆತ್ತವಳಲ್ಲ ಎನ್ನುವ ನಿರ್ಣಯಕ್ಕೆ ಬರುವ ಹಂತವಿದೆಯಲ್ಲ, ಅದೇ ರತ್ನನ ಬದುಕಿನ ಮಹತ್ವದ ತಿರುವ. ಅಮ್ಮ ಎನ್ನುವ ಅಸಲಿ ಡೆಫನೇಷನ್.
ರತ್ನ ತನ್ನಮ್ಮನನ್ನು ತಬ್ಬಿಕೊಳ್ಳಲಿಲ್ಲ, ಅಮ್ಮನ ಬಗ್ಗೆ ಎರಡೇ ಎರಡು ಒಳ್ಳೆಯ ಮಾತಾಡಲಿಲ್ಲ, ಕೊನೆಗೆ ಅಮ್ಮನನ್ನು ಅಮ್ಮ ಎಂದು ಕರೆಯಲೂ ಇಲ್ಲ. ಈ ವಿಷಾದವನ್ನು ಹೊತ್ತೇ ಚಿತ್ರ ಮುಕ್ತಾಯವಾಗುತ್ತದೆ. ಆದರೆ ತನ್ನೊಳಗಿನ ತಹತಹಿಕೆಗೆ ಉತ್ತರದ ಹುಡುಕಾಟದಲ್ಲಿ ಅಲೆದಾಡುವ ರತ್ನನಿಗೆ ಅನರ್ಘ್ಯ ರತ್ನವೇ ಸಿಕ್ಕಿರುತ್ತದೆ. ಕಾಶ್ಮೀರದಿಂದ ಯಲ್ಲವ್ವನ ಗುಡ್ಡ ಕೊನೆಗೆ ಗೋಕರ್ಣದವರೆಗೂ ಸುತ್ತಾಡಿದ ನಂತರ ಅಂತಿಮವಾಗಿ ಅಮ್ಮ ಸಿಗುತ್ತಾಳೆ ಅನ್ನುವುದೇ ಚಿತ್ರದ ಪೂರ್ತಿ ಟ್ರಾವೆಲ್ ಜರ್ನಿಯ ಸಾರ್ಥಕತೆ.
ಎಷ್ಟು ಚೆಂದದ ಕಥೆ ಹೇಳಿದ್ದಾರೆ ರೋಹಿತ್ ಪದಕಿ. ಕಾಡುವ ಕಥೆಗೆ ಅಮ್ಮನೆಂಬ ವಾತ್ಸಲ್ಯದ ಸೀರೆ ಉಡಿಸಿದ ಕ್ರೆಡಿಟ್ ಪೂರ್ತಿಯಾಗಿ ನಿರ್ದೇಶಕ ಪದಕಿಗೆ ಸಲ್ಲಬೇಕು.. ನನ್ನ ಪ್ರಕಾರ ಸೃಜನಾತ್ಮಕವಾಗಿ, ಕಲಾತ್ಮಕವಾಗಿ ಚಿತ್ರ ನೋಡುವ ಸಿನಿಪ್ರೇಮಿಗಳ ಪರವಾಗಿ ಹತ್ತಕ್ಕೆ ಹತ್ತು ಅಂಕ. ಸಿನಿ ವಿಮರ್ಷಕರು ಎನ್ನುವ ಹೆಸರಿನಲ್ಲಿ ಕೆಲವು ನಾಯಿಗಳು ಬೊಗಳಿದ್ದನ್ನ, ನರಿಗಳು ಊಳಿದ್ದನ್ನು ಕೇಳಿ ಸಿನಿಮಾ ನೋಡದೇ ಇರಬೇಡಿ. ಇವಕ್ಕೆ ಇಂತಹ ಕಥೆ ಮಲೆಯಾಳಂನಲ್ಲಾದರೆ ಆಹಾ ಓಹೋ. ಕನ್ನಡದವರ ಕಥೆಗಳೆಂದರೆ ಇವುಗಳ ತಾತ್ಸಾರ ಇದು ಮೊದಲನದ್ದೇನಲ್ಲ. ಅವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ. ಮೊದಲು ಖಂಡಿತಾ ಸಿನಿಮಾ ನೋಡಿ ಒಮ್ಮೆ. ನಿಧಾನಗತಿಯಲ್ಲಿ ಸಾಗುವ ಕಥೆ ಕ್ರಮೇಣ ಅಮಲೇರಿಸತ್ತೆ. ಕಿಕ್ ಅಲ್ಲ ಹ್ಯಾಂಗ್ ಒವರ್ ಮಾತ್ರ ಖಂಡಿತಾ ಉಳಿಯತ್ತೆ.
ಇತ್ತೀಚೆಗೆ ಹೆಚ್ಚಾಗಿ ಮಾಸ್ ಅಪಿಯರೆನ್ಸ್ನಲ್ಲಿ ಕಾಣಿಸುತ್ತಿದ್ದ, ಬಹುತೇಕ ಪ್ರತಿನಾಯಕ, ಖಳನಾಯಕನ ಪಾತ್ರಗಳಲ್ಲೇ ಬಣ್ಣ ಹಚ್ಚಿದ್ದ, ಕೈ ತುಂಬಾ ರಕ್ತ ಮೆತ್ತಿಕೊಳ್ಳುತ್ತಿದ್ದ ನಟರಾಕ್ಷಸ ಡಾಲಿ ಧನಂಜಯ್ ನಟನೆ ನಿಜಕ್ಕೂ ಮನಗೆಲ್ಲುತ್ತದೆ. ಚಿತ್ರದ ಕಥೆ ವೇಗವಾಗಿ ಓಡುವುದಿಲ್ಲ. ಅದು ಚಿತ್ರದ ಡ್ರಾಬ್ಯಾಕ್ ಅಂದುಕೊಳ್ಳಬೇಕಿಲ್ಲ. ಈ ಕಥೆಗೆ ಇಷ್ಟೇ ನಿಧಾನ ಒಳ್ಳೆಯದು. ನಾಯಕಿಯಾಗಿ ರೆಬೋ ಜಾನ್ ಅಭಿನಯವೂ ಪರವಾಗಿಲ್ಲ. ಅನುಪ್ರಭಾಕರ್, ರವಿಶಂಕರ್ ಗೌಡ, ಅಚ್ಯುತ್ ಕುಮಾರ್, ಪ್ರಮೋದ್, ಎಲ್ಲರ ಅಭಿನಯವೂ ಸಹಜವಾಗಿದೆ. ಆದರೆ ಚಿತ್ರ ನೋಡಿದ ನಂತರ ಮನಸನ್ನು ಆವರಿಸಿಕೊಳ್ಳುವ ಇಬ್ಬರು ತಾಯಂದಿರ ಪಾತ್ರದ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಉಮಾಶ್ರಿ ಮತ್ತು ಶೃತಿ ಕನ್ನಡ ಚಿತ್ರರಂಗದ ಅಭಿನಯ ಯೂನಿವರ್ಸಿಟಿ. ಇಬ್ಬರ ನಟನೆಯಲ್ಲಿ ಎಲ್ಲಿಯೂ ಹೆಚ್ಚಾಗುವುದಿಲ್ಲ, ಎಲ್ಲಿಯೂ ಕಡಿಮೆಯಾಗಲ್ಲ. ತಮಗೆ ಸಿಕ್ಕ ಪಾತ್ರಕ್ಕೆ ನಿಜಕ್ಕೂ ನ್ಯಾಯ ನೀಡಿದ್ದಾರೆ ಶೃತಿ ಮತ್ತು ಉಮಾಶ್ರಿ. ಈ ಎರಡು ಪಾತ್ರಗಳಿಗೆ ಬೇರೆ ಯಾರನ್ನೂ ಕಲ್ಪಿಸಿಕೊಳ್ಳುವುದೂ ಕಷ್ಟ ಅನ್ನುವಷ್ಟರ ಮಟ್ಟಿಗೆ ಪರಕಾಯ ಪ್ರವೇಶ ಇಬ್ಬರದ್ದು.
ಥಿಯೇಟರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವಿದು. ರತ್ನನ್ ಪ್ರಪಂಚದ ನಿಜವಾದ ಹೀರೋ ಕಥೆ ಮಾತ್ರ. ಸಿನಿಮಾ ಕೇವಲ ಮನೋರಂಜನೆ ಮಾತ್ರ. ಅದರಲ್ಲಿ ಸಿದ್ಧಾಂತವನ್ನೋ, ತರ್ಕವನ್ನೋ ಅಥವಾ ಆಧ್ಯಾತ್ಮವನ್ನೋ ಹುಡುಕಬಾರದು. ರೋಹಿತ್, ಡಾಲಿ ಎಂಡ್ ಟೀಮ್ ಖಂಡಿತಾ ವೀಕ್ಷಕರಿಗೆ ಮೋಸ ಮಾಡಿಲ್ಲ. ನಮ್ಮವರ ಸಿನಿಮಾವನ್ನು ನಾವೇ ಪ್ರೋತ್ಸಾಹಿಸದೇ ಮಲೆಯಾಳಿಗಳು ಕ್ಲಾಸಿಕ್, ತೆಲುಗರು ಫೆಂಟಾಬ್ಯುಲಸ್, ತಮಿಳರು ಎಕ್ಸ್ಟ್ರಾರ್ಡಿನರಿ, ಬಾಲಿವುಡ್ಡರು ಮ್ಯಾಜಿಶಿಯನ್ಸ್ ಅಂತ ತೌಡು ಕುಟ್ಟಿದರೆ ಚಂದನವನ ಉದ್ಧಾರವಾಗಲ್ಲ. ಸಾಧ್ಯವಾದರೆ ಒಮ್ಮೆ ಸಿನಿಮಾ ನೋಡಿ.
-ವಿಭಾ