ಪುನಿತ್ ಮತ್ತು ಜಗ್ಗೇಶ್ ಇಬ್ಬರದ್ದೂ ಒಂದೇ ದಿನ ಜನ್ಮದಿನ; ಅದು ೧೭ ಮಾರ್ಚ್. ರಾಜ್ಕುಮಾರ್ ಬದುಕಿದ್ದಾಗ ಪುನಿತ್ ಜನ್ಮದಿನದಂದು ಶುಭ ಹಾರೈಸಲು ಯಾರಾದರೂ ಬಂದರೆ, ಇವತ್ತು ನಮ್ಮ ಜಗ್ಗೇಶುದು ಹುಟ್ಟಿದ ದಿನ, ಅವನಿಗೂ ಶುಭ ಹಾರೈಸಿಯಪ್ಪ ಅಂತಿದ್ದರಂತೆ. ಪುನಿತ್ ಸಹ ಜಗ್ಗೇಶ್ ಬರ್ತ್ಡೇಗೆ ವಿಶ್ ಮಾಡುತ್ತಿದ್ದರು. ಪುನಿತ್ ಮತ್ತು ಜಗ್ಗೇಶ್ ನಡುವೆ ಅದ್ಭುತವಾದ ಒಡನಾಟವಿತ್ತು. ಪುನಿತ್ ದೇಹಾಂತ್ಯದಿಂದ ನೊಂದ ಜಗ್ಗೇಶ್ ಅತ್ಯಂತ ಖೇದದಿಂದ ಬರೆದುಕೊಂಡ ಶ್ರದ್ಧಾಂಜಲಿ ಇಲ್ಲಿದೆ, ನೋಡಿ..
“ಪುನೀತ್ ನಿನ್ನ 30 ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ. ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ. ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ. ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ. ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ. ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ. ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ, ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ. ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ. ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಭೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೆ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ. ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನ ಮನದಲ್ಲಿ ಉಳಿಸಿ ಕೊಳ್ಳುವೆ. ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ. I love you ಚಿನ್ನ..”
-ಜಗ್ಗೇಶ್ ಶಿವಲಿಂಗಪ್ಪ.