“ಕನ್ನಡದ ಕೋಟ್ಯಾಧಿಪತಿ”ಯನ್ನು ಕಳೆದುಕೊಂಡು ಬರಿದಾಯ್ತು ಕರುನಾಡು – “ಲೋಹಿತ್” ಪುನೀತ್ ಆಗಿದ್ದು ಹೇಗೆ..!
ಕ್ರೂರ ವಿಧಿಗೆ “ಅಭಿ”ಮಾನಿಗಳ ಶಾಪ ತಟ್ಟದೇ ಬಿಡಲ್ಲ
ಅಂಧಕಾರದಲ್ಲಿ ಮರೆಯಾದ “ದೊಡ್ಮನೆ ಹುಡುಗ”
“ಆಕಾಶ” ದಷ್ಟು ಪ್ರೀತಿ ಗಳಿಸಿದ್ದ ಕರುನಾಡಿನ “ಮೌರ್ಯ”
ಕ್ರೂರ ವಿಧಿಯ “ಚಕ್ರವ್ಯೂಹ”ದಲ್ಲಿ ಸಿಲುಕಿ ಕೋಟ್ಯಾಂತರ “ಅಭಿ”ಮಾನಿಗಳನ್ನು ತೊರೆದ “ಅಪ್ಪು” ಬಾರದ ಲೋಕಕ್ಕೆ ಪಯಣ ಬೆಳೆಸಾಗಿದೆ. ಕರುನಾಡಿನ ಜನರಿಂದ “ಆಕಾಶ” ದಷ್ಟು ಪ್ರೀತಿ ಗಳಿಸಿದ್ದ ಕನ್ನಡಿಗರ ಹೃದಯದ “ಅರಸು” ಇನ್ನಿಲ್ಲ ಎಂಬ ಕಹಿಸತ್ಯವನ್ನ ಇನ್ನೂವರೆಗೂ ಯಾರಿಂದಲೂ ಅರಗಿಸಿಕೊಳ್ಳಲಾಗ್ತಿಲ್ಲ. ಕರುನಾಡಿನಲ್ಲಿ “ಮುತ್ತುರಾಜ”ನ ಕೊಡುಗೆ ಬೆಟ್ಟದಷ್ಟು… ಚೆನ್ನೈನಲ್ಲಿ ಹುಟ್ಟಿದ ಅಪ್ಪು ಕರುನಾಡಿನ “ರಾಜ”ನಾಗಿ ಮೆರೆದು ಇಂದು “ಕಾಣದಂತೆ ಮಾಯ”ವಾಗಿದ್ದಾರೆ. 1975 ರ ಮಾರ್ಚ್ 17 ರಂದು ಚೆನ್ನೈನಲ್ಲಿ ಪುನೀತ್ ರಾಜ್ ಕುಮಾರ್ ಅವರು ಜನಿಸಿದ್ದರು. ಬಾಲ್ಯವನ್ನು ಅಲ್ಲಿಯೇ ಕಳೆದರು. 6 ವರ್ಷದವರಾಗಿದ್ದಾಗ ಅವರು ಕರ್ನಾಟಕಕ್ಕೆ ಬಂದರು.
ಪುನೀತ್ ರಾಜ್ ಕುಮಾರ್ ಅವರ ಮೂಲ ಹೆಸರು ಲೋಹಿತ್. ಬಾಲ್ಯದಲ್ಲೂ ಲೋಹಿತ್ ಎಂದೇ ಅಪ್ಪು ಹೆಸರಾಗಿದ್ದರು. ನಂತರ ನಾಯಕನಟನಾದ ದಿನಗಳಲ್ಲಿ ಪುನೀತ್ ರಾಜ್ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡರು. ಬಾಲ್ಯದಲ್ಲೂ ಕೂಡ ಪುನೀತ್ ರಾಜ್ ಕುಮಾರ್ ಅವರು ಅಷ್ಟೇ ಸಕ್ರಿಯರಾಗಿದ್ದರು. ನಟನೆ , ಗಾಯನ ಸೇರಿ ಹಲವು ಬಗೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ರು. ಬಾಲ್ಯನಟನಾಗಿದ್ದ ಅಪ್ಪು ನಂತರ ಸಿನಿಮಾರಂಗ ಬಿಟ್ಟು ಉದ್ಯಮದಲ್ಲಿ ತೊಡಗಿದ್ರು. ಅದಾದ ಕೆಲ ವರ್ಷಗಳ ನಂತರ ಮತ್ತೆ ಸಿನಿಮಾ ರಂಗದ ಕಡೆಗೆ ಒಲವು ತೋರಿಸಿದ “ಅರಸು” “ಅಪ್ಪು” ಸಿನಿಮಾ ಮೂಲಕ ನಾಯಕನಾಗಿ ಕಮ್ ಬ್ಯಾಕ್ ಮಾಡಿದ್ರು.