ದೊಡ್ಡಮನೆಯ ಮಗನ ಹೃದಯ ಶ್ರೀಮಂತಿಕೆಯೂ ದೊಡ್ಡದೇ; ಪುನೀತ್ ಸಮಾಜಮುಖಿ ಕಾರ್ಯಗಳು ಬಗ್ಗೆ ಬರೆದಷ್ಟೂ ಕಡಿಮೆಯೇ!
ಪುನೀತ್ ರಾಜ್ ಕುಮಾರ್ ಸಾವಿರಾರು ಅಸಹಾಯಕ, ಅಶಕ್ತ ಜನರಿಗೆ ನೆರಳಾದ ಆಲದ ಮರ ಎಂದರೆ ಖಂಡಿತಾ ತಪ್ಪಾಲ್ಲ. ಪುನೀತ್ ರಾಜ್ಕುಮಾರ್ ಕೇವಲ ತಮ್ಮ ಸಿನಿಮಾಗಳಲ್ಲಿ ಮಾತ್ರ ವೃದ್ಧರಿಗೆ, ಅಸಹಾಯಕರಿಗೆ ನೆರವಾಗುವ ಪಾತ್ರದಲ್ಲಿ ನಟಿಸಿ ಸುಮ್ಮನಾದವರಲ್ಲ. ನಿಜಜೀವನದಲ್ಲೂ ಜನತೆಗೆ ಮಾದರಿಯಾಗಿ ಮೆರೆದಿರುವ, ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡ ಮಾದರಿ ವ್ಯಕ್ತಿ.
ಪುನೀತ್ ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು. ಅವರು ಮಾಡುತ್ತಿದ್ದ ಸಾಮಾಜಿಕ ಕೆಲಸಗಳು ಹೇಗಿರುತ್ತಿದ್ದವು ಎಂದರೆ ಎಡಗೈನಲ್ಲಿ ಮಾಡಿದ್ದು ಬಲಗೈಗೆ ತಿಳಿಯುತ್ತಿರಲಿಲ್ಲ. ಹೀಗೆ ಪುನೀತ್ ಕೇವಲ ತೆರೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ಹೀರೋ ಆಗಿದ್ದರು.
ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45ಕ್ಕೂ ಹೆಚ್ಚು ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಪುನೀತ್ ಮಾಡಿರುವ ಸೇವೆ, ಮೆರೆಯುತ್ತಿದ್ದ ಹೃದಯ ಶ್ರೀಮಂತಿಕೆ ಇನ್ನು ನೆನಪು ಮಾತ್ರ. ರಾಜಕುಮಾರ ಸಿನಿಮಾದಿಂದ ಪಡೆದ ಸಂಭಾವನೆಯ ಒಂದು ಭಾಗವನ್ನು ವೃದ್ಧಾಶ್ರಮಗಳಿಗೆ ವಿನಿಯೋಗಿಸಿದ್ದರು ಕನ್ನಡಿಗರ ಮುದ್ದಿನ ‘ಅಪ್ಪು’.
ಯಾರಾದರೂ ವಿದ್ಯಾಥಿಗಳು ಓದಲು ಕಷ್ಟವಾಗಿದ್ದು ಅವರ ಗಮನಕ್ಕೆ ಬಂದರೆ ಕೂಡಲೇ ಆರ್ಥಿಕ ಸಹಾಯಕ್ಕೆ ಮುಂದಾಗುತ್ತಿದ್ದರು. ಕೋವಿಡ್ ಕಾಲದಲ್ಲಿ ಚಿತ್ರರಂಗದ ಸಿಬ್ಬಂದಿ ಕಷ್ಟದಲ್ಲಿದ್ದಾಗ ನೆರವಿಗೆ ಮೊದಲು ದಾವಿಸಿದ್ದವರು ಪುನೀತ್. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರಿಗೆ ಕೋವಿಡ್ ಸಂಕಷ್ಟಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಈಗ ಅವರ ಲೋಕನಿರ್ಗಮನದಿಂದ ಕೇವಲ ರಾಜ್ ಕುಟುಂಬಸ್ಥರು ಮಾತ್ರವಲ್ಲದೇ, ಅವರ ಆಶ್ರಯದಲ್ಲಿದ್ದ ಅದೆಷ್ಟೋ ಸಾವಿರ ಮಂದಿ ಅನಾಥಭಾವವನ್ನು ಅನುಭವಿಸುತ್ತಿದ್ದಾರೆ.
-ಅಂಬಿಕಾ ಸೀತೂರು