ಅಗಲಿದ ರಾಜಕುಮಾರನಿಗೆ ಯಕ್ಷಗಾನದ ನಮನ
ಅಗಲಿದ ಕನ್ನಡದ ಯುವರತ್ನ ಪುನೀತ್ ರಾಜ್ ಕುಮಾರ್ ಬಗ್ಗೆ ಯಕ್ಷಗಾಯನದ ಮೂಲಕ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ. ಗಂಡುಕಲೆ ಯಕ್ಷಗಾನದ ಅಭಿಮಾನಿಯಾಗಿರುವ ಪುನೀತ್ ರಾಜಕುಮಾರ್ ಹಲವು ಬಾರಿ ಯಕ್ಷಗಾನದ ಹಿರಿಮೆಗೆ ಮನಸೋತು ಮಾತನಾಡಿದ್ದರು.
ಜೀವನ ಪಯಣ ನಿಲ್ಲಿಸಿದ ಅಪ್ಪುಗೆ ಈ ಹಾಡನ್ನು ಅರ್ಪಣೆ ಮಾಡಲಾಗಿದೆ. ಭಾಗವತ, ಹಿರಿಯ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾಹಿತ್ಯ ಬರೆದಿದ್ದಾರೆ. ಯಶಸ್ವೀ ಕಲಾವೃಂದ ತೆಕ್ಕಟ್ಟೆ ಪದ್ಯವನ್ನು ಪ್ರಸ್ತುತಪಡಿಸಿದೆ.
“ಚಿನ್ನದ ಪ್ರತಿಭೆಯ ಕಣ್ಮರೆಯಲಿ ಜಗ ಮುಳುಗಿದೆ ನೋವಿನಲಿ” ಎಂದು ಭಾವಪೂರ್ಣ ಸಾಹಿತ್ಯವುಳ್ಳ ಯಕ್ಷಗೀತೆ ಮೂಲಕ ಪುನೀತ್ ರಾಜ್ಕುಮಾರ್ಗೆ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ.
“ಕಂಬನಿದುಂಬಿ ಹೋದೆಯಾ ದೂರ ಕನ್ನಡ ರಾಜಕುಮಾರ.
ಅಂಬರದಲ್ಲಿ ಚಿರತಾರಕೆಯಾದೆಯಾ ಚಂದನವನಮಾಲಾ”
“ಕಡಲೊಳು ಸಂಜೆಗೆ ಮುಳುಗುವ ನೇಸರ ನಡುಹಗಲಲಿ ಮುಳುಗಿ ಕತ್ತಲೆ ನೀಡಿದ”,
“ಚಿನ್ನದ ಪ್ರತಿಭೆಯ ಕಣ್ಮರೆಯಲಿ ಜಗ ಮುಳುಗಿದೆ ನೋವಿನಲಿ”
ಹೀಗೆ ಭಾವಪೂರ್ಣ ಸಾಹಿತ್ಯವುಳ್ಳ ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.