ಕನ್ನಡ ಚಿತ್ರಗೀತೆಗಳ ಸಾಹಿತ್ಯ ‘ರತ್ನತ್ರಯರು’ ಎಂದೇ ಪ್ರಸಿದ್ಧರಾದವರು ಕನ್ನಡ ಸಿನಿ ಜಗತ್ತಿನ ಸಮಧುರ ಗೀತೆಗಳನ್ನು ಜಗತ್ತಿನ ಸಿನಿ ಪ್ರೇಮಿಗಳಿಗೆ ನೀಡಿದ ಆರ್.ಎನ್ ಜಯಗೋಪಾಲ್, ಚಿರಂಜೀವಿ ಉದಯಶಂಕರ್ ಮತ್ತು ವಿಜಯ ನಾರಸಿಂಹ. ಈ ಮೂವರೂ ಶ್ರೇಷ್ಠ ಕವಿತ್ರಯರು ಒಟ್ಟಿಗೆ ಇರುವ ಬಹು ಅಪರೂಪದ ಪೋಟೋ ಇಲ್ಲಿದೆ ನೋಡಿ. 1967ರಲ್ಲಿ ಬಿ.ಎ ಅರಸ್ ಕುಮಾರ್ ತಮ್ಮದೇ ಪ್ರಸಿದ್ದ ನಾಟಕ ಅಭಾಗಿನಿಯನ್ನು ‘ಬಂಗಾರದ ಹೂವು’ ಎಂಬ ಹೆಸರಲ್ಲಿ ಚಿತ್ರವಾಗಿಸಲು ನಿರ್ಧರಿಸಿದರು. ಅವರಿಗೆ ಬೆಂಬಲವಾಗಿ ನಿಂತವರು ಅವರ ಬಾಲ್ಯದ ಸಹಪಾಠಿ ಚಿ.ಉದಯಶಂಕರ್. ಉದಯಶಂಕರ್ ನೆರವಿನಿಂದಲೇ ರಾಜ್ ಕುಮಾರ್, ಕಲ್ಪನಾ, ಶೈಲಶ್ರೀ, ಉದಯ ಕುಮಾರ್, ಬಾಲಕೃಷ್ಣ, ನರಸಿಂಹ ರಾಜು ಮುಂತಾದ ಗಣ್ಯ ನಟರು ಅಭಿನಯಿಸಲು ಒಪ್ಪಿದರು. ಅರಸ್ ಕುಮಾರ್ ಅವರಿಗೆ ಮೂವರೂ ಗೀತ ರಚನೆಕಾರರಿಂದ ಒಟ್ಟಿಗೆ ಹಾಡು ಬರೆಸುವ ಹಂಬಲ. ಈ ಮೊದಲು ಮೂವರೂ ಒಟ್ಟಿಗೆ ಬರೆದಿದ್ದರೂ ಒಂದೇ ಸ್ಟುಡಿಯೋದ ಸನ್ನಿವೇಶದಲ್ಲಿ ಬರೆದಿರಲಿಲ್ಲ. ಮದ್ರಾಸ್ನ ಗೋಲ್ಡನ್ ಸಿನಿ ಸ್ಟುಡಿಯೋದಲ್ಲಿ ಇಂತಹ ಸನ್ನಿವೇಶ ಸೃಷ್ಠಿಯಾಯಿತು. ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರು. ಸಾವಿರಾರು ಅಮರ ಗೀತೆಗಳನ್ನು ಸೃಷ್ಟಿಸಿದ ಎಸ್.ಪಿ.ರಾಮನಾಥನ್ ಮತ್ತು ಕೋಟೇಶ್ವರ ರಾವ್ ರೆಕಾರ್ಡಿಸ್ಟ್ಗಳು. ಜಯಗೋಪಾಲ್ ಅವರ ‘ಆ ಮೊಗವು ಎಂಥಾ ಚೆಲುವು’ ಉದಯಶಂಕರ್ ಅವರ “ಓಡುವ ನದಿ ಸಾಗರವ ಸೇರಲೇಬೇಕು’ ಮತ್ತು ವಿಜಯನಾರಸಿಂಹ ಅವರ ‘ನೀ ನಡೆವ ಹಾದಿಯಲ್ಲಿ’ ಒಟ್ಟಿಗೆ ಸೃಷ್ಟಿಯಾದವು. ನಂತರ ಮೂವರೂ ‘ವಿಸ್ಡನ್’ ಹೋಟಲ್ನಲ್ಲಿ ಕಾಫಿ ಕುಡಿದು ಹೊರ ಬಂದಾಗ ಉದಯಶಂಕರ್ ‘ಬನ್ರೋ ಇಲ್ಲಿನ ಲಿಂಗಂ ಸ್ಟುಡಿಯೋ’ದಲ್ಲಿ ಪೋಟೋಗಳು ಚೆನ್ನಾಗಿ ಬರ್ತಾವಂತೆ, ತೆಗೆಸಿ ಕೊಳ್ಳೋಣ’ ಎಂದರಂತೆ. ಹಾಗೆ ಸೃಷ್ಟಿಯಾಗಿದ್ದು ಈ ಚಾರಿತ್ರಿಕ ಪೋಟೋ..
-ಶ್ರೀಧರ್ ಮೂರ್ತಿ, ಖ್ಯಾತ ಸಿನಿಮಾ ಪತ್ರಕರ್ತರು, ಬೆಂಗಳೂರು