ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದ ವನ್ಯಸಂಪತ್ತಿನ ಕುರಿತಾದ ‘ಗಂಧದ ಗುಡಿ’ ಚಿತ್ರವು ಶೀಘ್ರವೇ ರಿಲೀಸ್ ಆಗಲಿದೆ. ಅಪ್ಪು ಅವರ 11ನೇ ದಿನದ ಕಾರ್ಯದ ನಂತರ ಇದನ್ನ ಬಿಡುಗಡೆ ಮಾಡುವ ಯೋಜನೆ ಮಾಡಲಾಗಿದೆ.
ಅಂದ್ಹಾಗೆ ಇದನ್ನ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದೇ ರಿಲೀಸ್ ಮಾಡಬೇಕೆಂದು ಅಪ್ಪು ಅವರ ಕನಸಾಗಿತ್ತು. ಆದ್ರೆ ವಿಧಿ ಎಲ್ಲವನ್ನೂ ಹಾಳು ಮಾಡಿದೆ. ಈ ಚಿತ್ರಕ್ಕಾಗಿ ಲಾಕ್ಡೌನ್ ವೇಳೆ 2 ತಿಂಗಳು ಪುನೀತ್ ಕಾಡು ಸುತ್ತಿದ್ದರು.
ಆ ಸಮಯದಲ್ಲಿ ಕಾಡಿನಲ್ಲಿ ಕಳೆದ ಕ್ಷಣಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಅದನ್ನು ನವೆಂಬರ್ 1 ರಂದು ಬಿಡುಗಡೆ ಮಾಡಲು ತೀರ್ಮಾನಿಸಿ, ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ನಮ್ಮ ನಾಡಿನ ಕಾಡುಗಳು, ವನ್ಯಜೀವಿ ಸಂಪತ್ತನ್ನು ಕುರಿತ ಚಿತ್ರವಿದಾಗಿದ್ದು, ‘ಗಂಧದ ಗುಡಿ’ ಎಂದು ಹೆಸರಿಡಲು ಉದ್ದೇಶಿಸಲಾಗಿತ್ತು.
90 ನಿಮಿಷಗಳ ಈ ಚಿತ್ರವನ್ನು ರಾಜ್ಯೋತ್ಸವದ ದಿನ ಬಿಡುಗಡೆ ಮಾಡಬೇಕಿತ್ತು. ಆದರೆ ಇದಕ್ಕೂ ಮುನ್ನವೇ ಪುನೀತ್ ನಿಧನ ಹೊಂದಿದ್ದರು. ಇದೀಗ ಅಪ್ಪು ಅವರ 11 ದಿನದ ಕಾರ್ಯ ಮುಗಿದ ನಂತರ ರಿಲೀಸ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಚರ್ಚಿಸಿ, ಬಳಿಕ ಬಿಡುಗಡೆ ಕುರಿತು ಯೋಜಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.