ಇಂಡಿಯನ್ -2 ಚಿತ್ರದ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ನಿರ್ದೇಶಕ ಶಂಖರ್ ಮತ್ತೆ ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ. ಬಹುಭಾಷಾ ನಟ ಕಮಲ್ ಹಾಸನ್ ಮತ್ತು ಸ್ಟಾರ್ ನಿರ್ದೇಶಕ ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಇಂಡಿಯನ್ -2 ಚಿತ್ರಕ್ಕೆ ಸಾಕಷ್ಟು ಅಡತಡೆಗಳು ಬಂದಿದ್ದವು. ನಿರ್ದೇಶಕ ಶಂಕರ್ ಮತ್ತು ನಿರ್ಮಾಣ ಸಂಸ್ಥೆಯ ಲೈಕ ಪ್ರೋಡಕ್ಷನ್ ನಡುವಿನ ಗೊಂದಲಗಳಿಗೆ ಕೋರ್ಟ್ ನಲ್ಲಿ ಪರಿಹಾರ ಸಿಕ್ಕಿದೆ. ಹೀಗಾಗಿ ಶಂಕರ್ ಮತ್ತೆ ಚಿತ್ರವನ್ನು ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದಾರೆ. 1996ರಲ್ಲಿ ಭಾರೀ ಸದ್ದು ಮಾಡಿರುವ ಇಂಡಿಯನ್ ಚಿತ್ರದ ಮುಂದುವರಿದ ಭಾಗವೇ ಇಂಡಿಯನ್ -2 ಚಿತ್ರ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ, ಕಾಜಲ್ ಅಗರ್ ವಾಲ್ ಕೂಡ ನಟಿಸಿದ್ದರೆ. ಅನಿರುದ್ಧ ರವಿಚಂದ್ರನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಆದ್ರೆ ನಿರ್ಮಾಣ ಸಂಸ್ಥೆ ಮತ್ತು ಶಂಕರ್ ನಡುವಿನ ಭಿನ್ನಾಭಿಪ್ರಾಯದಿಂದ ಚಿತ್ರದ ಶೂಟಿಂಗ್ ಕೂಡ ಸ್ಥಗಿತಗೊಂಡಿತ್ತು. ನಿರ್ಮಾಣ ಸಂಸ್ಥೆಯ ಕಂಡಿಷನ್ ಗಳಿಗೆ ಒಪ್ಪದ ಶಂಕರ್ ಚಿತ್ರ ತಂಡದಿಂದ ಹೊರ ಬಂದಿದ್ದರು. ಆದಾದ ನಂತರ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಬೇಕಾಯ್ತು. ಕೊನೆಗೆ ಕೋರ್ಟ್ ನಲ್ಲಿ ಶಂಕರ್ ಅವರ ಪರವಾಗಿಯೇ ತೀರ್ಪು ಬಂದಿತ್ತು. ಇದೀಗ ಸಹಮತದೊಂದಿಗೆ ಚಿತ್ರ ತಂಡ ಶೂಟಿಂಗ್ ಮಾಡಲು ಮುಂದಾಗಿದೆ. ಒಟ್ಟು ನೂರು ದಿನಗಳ ಶೂಟಿಂಗ್ ನಡೆಯಲಿದ್ದು, ಮುಂದಿನ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಂದ ಹಾಗೇ ಶಂಕರ್ ಅವರು ಈ ನಡುವೆ ಇನ್ನೊಂದು ಚಿತ್ರದ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದಾರೆ. ರಾಮ್ ಚರಣ್ ನಟಿಸಿರುವ ಈ ಚಿತ್ರದ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಇದೀಗ ಇಂಡಿಯನ್ -2 ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ಸ್ಟಾರ್ ನಿರ್ದೇಶಕ ಶಂಕರ್ ಅವರು ಫುಲ್ ಬಿಝಿಯಾಗಿದ್ದಾರೆ. ಮುಂದಿನ ವರ್ಷ ಅವರ ಎರಡು ಅದ್ದೂರಿ ಚಿತ್ರಗಳು ತೆರೆಗೆ ಬರಲಿವೆ.