ಯೂಟ್ಯೂಬರ್ ‘ಹಿಂದೂಸ್ತಾನಿ ಭಾವು’ ಅರೆಸ್ಟ್
ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಾಮಾಜಿಕ ಮಾಧ್ಯಮದ ಸ್ಟಾರ್ ಯೂಟ್ಯೂಬರ್ ‘ಹಿಂದೂಸ್ತಾನಿ ಭಾವು’ ಅಲಿಯಾಸ್ ವಿಕಾಸ್ ಫಾಟಕ್ ಅವರನ್ನು ಮುಂಬೈನಲ್ಲಿ ಧಾರಾವಿ ಪೊಲೀಸರು ಬಂಧಿಸಿದ್ದಾರೆ. ಸೋಮವಾರ 10 ಮತ್ತು 12 ನೇ ತರಗತಿಗಳ ಆಫ್ ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ ವಾಡ್ ಅವರ ನಿವಾಸದ ಬಳಿ ಜಮಾಯಿಸುವಂತೆ ಅವರು ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದರು.
ಕೋವಿಡ್-19 ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ನಿನ್ನೆ ಧಾರಾವಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ವಿಕಾಸ್ ಅವರನ್ನು ಧಾರಾವಿ ಪೊಲೀಸರು ಬಂಧಿಸಿದ್ದಾರೆ. ‘ಹಿಂದುಸ್ತಾನಿ ಭಾವು’ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ವಿದ್ಯಾರ್ಥಿಗಳನ್ನು ಪ್ರಚೋದಿಸಿರುವ ಆರೋಪ ಅವರ ಮೇಲಿದೆ.
ಈ ಪ್ರಕರಣದಲ್ಲಿ ಧಾರಾವಿ ಪೊಲೀಸರು ಇಕ್ರಾರ್ ಖಾನ್ ವಖಾರ್ ಖಾನ್ ಎಂಬಾತನನ್ನೂ ಬಂಧಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಿಗಾಗಿ ಅಶೋಕ್ ಮಿಲ್ ನಾಕಾದಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು. ಸಚಿವರ ನಿವಾಸದ ಬಳಿ ತೆರಳದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 10 ಮತ್ತು 12 ನೇ ತರಗತಿಗಳಿಗೆ ವೈಯಕ್ತಿಕವಾಗಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು.