ಸಿಎಂ ಬೊಮ್ಮಾಯಿ , ಪ್ರಧಾನಿ ಮೋದಿ , ರಾಷ್ಟ್ರಪತಿಗಳಿಂದ ಸಂತಾಪ
ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ರಾಜ್ಯ ದೇಶದ ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ.. ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸಂತಾಪ ಸೂಚಿಸಿದ್ದು ಅವರ ಹಾಡುಗಳು ಕೇವಲ ಸಿನಿಮಾಕ್ಕೆ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳು, ದೇವರ ಗೀತೆಗಳನ್ನು ಹಾಡಿದ್ದಾರೆ.
ಯೇ ಮೇರೆ ವತನ್ ಕಿ ಲೋಗೋ ಹಾಡು ಇವತ್ತಿಗೂ ಕೇಳಿದ್ರೆ ದೇಶಭಕ್ತಿ ಉಕ್ಕಿಹರಿಯುತ್ತೆ. ಈ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಲತಾ ಮಂಗೇಶ್ಕರ್ ಕನ್ನಡದಲ್ಲೂ ಹಾಡಿದ್ದಾರೆ. ಅವರಿಗೆ ಕನ್ನಡದ ನಂಟೂ ಇತ್ತು. ನಮ್ಮೆಲ್ಲರಿಗೂ ಅಪಾರ ದು:ಖವಾಗಿದೆ. ಭಾರತದ ಕೋಗಿಲೆ ಹಾಡೋದನ್ನು ನಿಲ್ಲಿಸಿದೆ. ಇಡೀ ಭಾರತ ದು:ಖದಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಸಾರಸ್ವತ ಲೋಕದಲ್ಲಿ ಸದಾ ಮಿನುಗುತ್ತಿರುತ್ತಾರೆ ಎಂದಿದ್ದಾರೆ..
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಂತಾಪ ಸೂಚಿಸಿದ್ದಾರೆ. ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ. ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ. ಇದು ನನ್ನ ಸೌಭಾಗ್ಯವೆಂದೆ ಅಂದುಕೊಳ್ಳುತ್ತೇನೆ. ಅವರೊಂದಿಗಿನ ನನ್ನ ಸಂವಾದಗಳು ಎಂದಿಗೂ ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ಇಡೀ ದೇಶದ ಜೊತೆಗೆ ನಾನು ಸಹ ದುಃಖಿಸುತ್ತೇನೆ. ಲತಾ ಮಂಗೇಶ್ಕರ ಸಾವಿನ ಕುರಿತು ಕುಟುಂಬದವರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದ್ದೇನೆ ಎಂದಿದ್ಧಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಿಸಿ , ಲತಾ ಜಿ ಅವರ ನಿಧನವು ನಮ್ಮನ್ನು ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ನೋವು ತಂದಿದೆ. ಅವರ ವಿಶಾಲ ಶ್ರೇಣಿಯ ಹಾಡುಗಳಲ್ಲಿ, ಭಾರತದ ಸಾರ ಮತ್ತು ಸೌಂದರ್ಯವನ್ನು ನಿರೂಪಿಸಲಾಗಿದೆ. ಮುಂದಿನ ತಲೆಮಾರುಗಳು ತಮ್ಮ ಆಂತರಿಕ ಭಾವನೆಗಳ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಹಕಾರಿಯಾಗುವಂತಹ ಹಾಡುಗಳವು. ಭಾರತ ರತ್ನ, ಲತಾ ಮಂಗೇಶ್ಕರ್ ಅವರ ಸಾಧನೆಗಳು ಎಂದಿಗೂ ಅಚ್ಚಳಿಯದೇ ಉಳಿಯುತ್ತವೆ ಎಂದು ಟ್ವಿಟ್ ಮಾಡಿದ್ದಾರೆ.