ಇತ್ತೀಚೆಗೆ ಪಂಜಾಬಿನ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲ ಸೃಷ್ಟಿ ಮಾಡಿತ್ತು.. ಆಕ್ರೋಶ ಭುಗಿಲೆದ್ದಿತ್ತು.. ಈ ಪ್ರಕರಣ ಸಂಬಂಧ ಈಗ ಶೂಟರ್ ಸಂತೋಷ್ ಜಾಧವ್ ನನ್ನು ಪುಣೆ ಪೊಲೀಸರು ಅರೆಸ್ಟ್ ಮಾಡಿದ್ಧಾರೆ.
ಪುಣೆ ಗ್ರಾಮಾಂತರ ಪೊಲೀಸರು ಮೂಸೆವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿ ಜಾಧವ್ ಸಹಾಯಕನನ್ನು ಸಹ ಬಂಧಿಸಿದ್ದಾರೆ.
ಪುಣೆಯ ಮಂಚರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2021ರ ಕೊಲೆ ಪ್ರಕರಣದಲ್ಲಿ ಜಾಧವ್ ನನ್ನು ಬಂಧಿಸಲಾಗಿದೆ. ಆತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‍ನ ಸದಸ್ಯನಾಗಿದ್ದ. ಜಾಧವ್ ಪತ್ತೆಗಾಗಿ ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹಲವು ತಂಡಗಳನ್ನು ಕಳೆದ ವಾರ ಗುಜರಾತ್ ಮತ್ತು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು.
1 ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಜಾಧವ್ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಒಬ್ಬ ನಾಗನಾಥ್ ಸೂರ್ಯವಂಶಿ ಮತ್ತು ಜಾಧವ್ ಹೆಸರು ತನಿಖೆಯಲ್ಲಿ ಕೇಳಿ ಬಂದಿರುವುದಾಗಿ ತಿಳಿದುಬಂದಿದೆ..
2021ರಲ್ಲಿ ನಡೆದ ಕೊಲೆಯ ನಂತರ ಜಾಧವ್ ಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಸಿದ್ದೇಶ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನೂ ಬಿಷ್ಣೋಯಿ ಗ್ಯಾಂಗ್‍ನ ಸದಸ್ಯ ಎಂಬುದು ಗೊತ್ತಾಗಿದೆ..