Sandalwood : ಕನ್ನಡ ನಿರ್ದೇಶಕ ಕೆ.ಆರ್. ಮುರಳಿ ಕೃಷ್ಣ ಹೃದಯಾಘಾತದಿಂದ ನಿಧನ
ಕನ್ನಡ ಸಿನಿಮಾದ ಹಿರಿಯ ನಿರ್ದೇಶಕ ಕೆ.ಆರ್. ಮುರಳಿ ಕೃಷ್ಣ ಅವರು ನವೆಂಬರ್ 14ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಸಂಜೆ 7.30ರ ಸುಮಾರಿಗೆ ಅವರು ಇಹಲೋಕ ತ್ಯಜಿಸಿದ್ದಾರೆ.
ಇತ್ತೀಚೆಗೆ ಕೆ.ಆರ್. ಮುರಳಿ ಕೃಷ್ಣ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಅದರ ಸಲುವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಸರ್ಜರಿ ಬಳಿಕ ಹೃದಯಾಘಾತ ಸಂಭವಿಸಿದ ಪರಿಣಾಮವಾಗಿ ಅವರು ನಿಧನರಾಗಿದ್ದಾರೆ. ಅವರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಮುರಳಿ ಕೃಷ್ಣ ಅವರು ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ನಿರ್ಮಿಸಿದ್ದರು.
ನಿರ್ದೇಶಕ, ನಿರ್ಮಾಪಕ ಕೆ.ಆರ್ ಮುರಳಿ ಕೃಷ್ಣ ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಮುರಳಿ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಸಹಕಾರ ನಗರದ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಮಧ್ಯಾಹ್ನ 12:30ಕ್ಕೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.