COPD ಜಾಗೃತಿ ಕಾರ್ಯಕ್ರಮಕ್ಕೆ ಶ್ವಾಸಕೋಶ ತಜ್ಞರ ಜೊತೆಗೂಡಿದ ಚಲನಚಿತ್ರ ವಾಣಿಜ್ಯ ಮಂಡಳಿ
ವಿಶ್ವ ಸಿಒಪಿಡಿ(ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶ ರೋಗ)ದಿನವನ್ನಾಗಿ ನವೆಂಬರ್ 16ರನ್ನು ಆಚರಿಸಲಾಗುತ್ತದೆ.
ಇದರ ಪ್ರಯುಕ್ತ ಕರ್ನಾಟಕ ಶ್ವಾಸಕೋಶ ತಜ್ಞರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇವರ ಸಹಯೋಗದಲ್ಲಿ ಜನರಿಗೆ ಸಿಒಪಿಡಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇತ್ತೀಚೆಗೆ ಸಿಒಪಿಡಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಗ್ಲೋಬಲ್ ಇನಿಶಿಯೇಟಿವ್ ಫಾರ್ ಕ್ರೋನಿಕ್ ಅಬ್ಸಟ್ರಾಕ್ಟಿವ್ ಲಂಗ್ ಡಿಸೀಸ್ ವತಿಯಿಂದ ನವೆಂಬರ್ 16ರನ್ನು ವಿಶ್ವ ಸಿಒಪಿಡಿ ದಿನವನ್ನಾಗಿ ಆಚರಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ಶ್ವಾಸಕೋಶ ತಜ್ಞರ ಸಂಘ ಹಮ್ಮಿಕೊಂಡಿದ್ದ ಸಿಒಪಿಡಿ ಬಗೆಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಲಾವಿದರ ಸಂಘ ಪೂರ್ಣ ಪ್ರಮಾಣದ ಸಹಕಾರ ನೀಡಿತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಚಿತ ಶ್ವಾಸಕೋಶದ ಕಾರ್ಯಕ್ಷಮತೆ ಪರೀಕ್ಷೆ ಮಾಡಲಾಯಿತು. ಜೊತೆಗೆ ಸಿಒಪಿಡಿ ಕಾಯಿಲೆ ಲಕ್ಷಣ, ಚಿಕಿತ್ಸೆ ಆರೈಕೆ ಬಗ್ಗೆ ತಿಳಿಸಿಕೊಡಲಾಯಿತು.
ಕರ್ನಾಟಕ ಶ್ವಾಸಕೋಶ ತಜ್ಞರ ಸಂಘದ ಅಧ್ಯಕ್ಷರಾದ ಡಾ.ಸತೀಶ್ ಮಾತನಾಡಿ ಪ್ರತಿ ವರ್ಷ ನವೆಂಬರ್ ಮೂರನೇ ಬುಧವಾರ ನಾವು ವಿಶ್ವ ಸಿಒಪಿಡಿ ದಿನವನ್ನ ನಡೆಸುತ್ತೇವೆ, ಆ ದಿನ ಸಿಒಪಿಡಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಸಿಓಪಿಡಿ ಕಾಯಿಲೆ ಮಾರಣಾಂತಿಕವಾಗಿದ್ದು ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಕಾಯಿಲೆಯಾಗಿದೆ, ಈ ಕಾಯಿಲೆ ಗುಣಪಡಿಸಲು ಸಾಧ್ಯವಿಲ್ಲ ಆದರೆ ತಡೆಗಟ್ಟಬಹುದು, ಧೂಮಪಾನ ಇದಕ್ಕೆ ಪ್ರಮುಖ ಕಾರಣ. ಧೂಮಪಾನವನ್ನ ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಚಿತ್ರರಂಗದ ಕಲಾವಿದರಿಗೆ ಮತ್ತು ಕಾರ್ಮಿಕರಿಗೆ ತಿಂಗಳಿಗೊಮ್ಮೆ ಉಚಿತ ತಪಾಸಣೆ ಮಾಡುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಚಲನಚಿತ್ರವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ್ ರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಡಾ.ಸುಮಾ ಸೇರಿದಂತೆ ಹಲವರು ಭಾಗಿಯಾಗಿದ್ದರು.