Vishnuvardhan : ವಿಷ್ಣುವರ್ಧನ್ ರ ಕನಸಿನ ಮನೆ ವಾಲ್ಮೀಕ ಗೃಹ ಪ್ರವೇಶ ಸಂಭ್ರಮ..!!
ಅಭಿನಯ ಭಾರ್ಗವ, ಸಾಹಸಿಂಹ ವಿಷ್ಣುವರ್ಧನ್ ಅವರು ಬದುಕಿ ಬಾಳಿದ ಮನೆ ಇದೀಗ ಹೊಸ ನಾವಿನ್ಯತೆಯನ್ನ ಪಡೆದುಕೊಂಡಿದೆ. ಜಯನಗರದಲ್ಲಿರುವ ಈ ಮನೆಗೆ ನವೀಕರಣದ ನಂತರ ವಲ್ಮೀಕ ಎಂದು ಹೆಸರಿಡಲಾದಗಿದೆ.
ಇಂದು ನವೆಂಬರ್ 27 ರಂದು ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತಿ ವಿಷ್ಣುವರ್ಧನ್ ವಿಷ್ಣು ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಅವರು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರು 1976 ರಲ್ಲಿ ಈ ಜಾಗವನ್ನ ಖರೀದಿ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಮನೆಯ ನವೀಕರಣ ಕೆಲಸ ನಡೆಸಲಾಗುತ್ತಿತ್ತು. ವಲ್ಮೀಕಿ ಮನೆಯ ಗೇಟಿನ ಮುಂಭಾಗದಲ್ಲಿ ಸಿಂಹದ ಕಂಚಿನ ಮುಖವನ್ನ ಕೆತ್ತಲಾಗಿದೆ.
ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್, ನಟ ಜಗ್ಗೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಸಾಹಸಸಿಂಹ ನಮ್ಮ ಅಚ್ಚುಮೆಚ್ಚಿನ ನಟ. ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸಗಳು ನಡೀತಿವೆ. ಸದ್ಯದಲ್ಲೇ ವಿಷ್ಣು ಸ್ಮಾರಕದ ಉದ್ಘಾಟನೆ ಸಮಾರಂಭವಾಗುತ್ತೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ. ವಿಷ್ಣು ಘನತೆಯನ್ನ ಎತ್ತಿಹಿಡಿಯೋ ಮ್ಯೂಸಿಯಂ ಮಾಡ್ತೀವಿ’ ಎಂದರು.
ಸಂಸದೆ ಸುಮಲತಾ ಅವರು ಟ್ವೀಟ್ ಮಾಡಿ ಅಂಬರೀಶ್ ಅವರ ಕುಚಿಕು ವಿಷ್ಣುವರ್ಧನ್ ಅವರ ಕನಸಿನ ಮನೆ, ಇದೀಗ ನವೀಕರಣಗೊಂಡು ಹೊಸ ವಿನ್ಯಾಸದಲ್ಲಿ ತಲೆಯೆತ್ತಿದೆ. ಆ ಹೊಸ ಮನೆಯ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದೆ. ಹೊಸ ಮನೆಯಲ್ಲಿ ಸದಾ ಸಂಭ್ರಮವೇ ತುಂಬಿರಲಿ ಎಂದು ನಾನು ಮತ್ತು ಅಂಬರೀಶ್ ಅವರ ಪರವಾಗಿ ಹಾರೈಸಿದೆ ಎಂದು ಟ್ವೀಟ್ ಮಾಡಿದ್ದಾರೆ.