ಬೆಂಗಳೂರು: ರೇಣುಕಾಸ್ವಾಮಿ (Renukaswamy Murder) ಹತ್ಯೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ದರ್ಶನ್ ಗ್ಯಾಂಗ್ ನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ನಗರದ ಎಸಿಎಂಎ ನ್ಯಾಯಾಲಯವು ಆದೇಶಿಸಿತ್ತು. ಹೀಗಾಗಿ ಜಾಮೀನು ಪಡೆಯುವವರೆಗೆ ದರ್ಶನ್ ಗ್ಯಾಂಗ್ಗೆ ಸೆರೆಮನೆ ವಾಸ ಅನುಭವಿಸಲಿದ್ದಾರೆ. ಇನ್ನೊಂದೆಡೆ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆಯಲು ನಟ ದರ್ಶನ್ ಗೆ ನ್ಯಾಯಾಲಯ ಅನುಮತಿ ನೀಡಿಲ್ಲ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್ ನಲ್ಲಿ ದರ್ಶನ್ ಇದ್ದು, ಮಹಿಳಾ ವಿಭಾಗದಲ್ಲಿ ಪವಿತ್ರಾಗೌಡ ಇದ್ದಾರೆ. ಗ್ಯಾಂಗ್ ನ ಸಹಚರರು ವಿಚಾರಣಾಧೀನ ಕೈದಿಗಳ ವಿಭಾಗದಲ್ಲಿ ಪ್ರತ್ಯೇಕವಾಗಿ ಬಂಧನದಲ್ಲಿದ್ದಾರೆ. ಮೊದಲ ದಿನ ಭಾನುವಾರ ಸಹಚರರ ಜತೆ ಮಾತನಾಡುತ್ತಾ ದರ್ಶನ್ ಕಾಲ ಕಳೆದಿದ್ದಾರೆ ಎನ್ನಲಾಗಿದೆ.
ವಿಚಾರಣಾಧೀನ ಕೈದಿಗಳಿಗೆ ವಿತರಿಸಿದ ಚಪಾತಿ, ಅನ್ನ, ಸಾಂಬಾರ್ ಹಾಗೂ ಮಜ್ಜಿಗೆಯನ್ನೇ ದರ್ಶನ್ ಕೂಡ ಸೇವಿಸಿದ್ದಾರೆ. ಭಾನುವಾರ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲಿ ಸಂದರ್ಶಕರ ಭೇಟಿಗೆ ಅವಕಾಶವಿಲ್ಲ. ಹೀಗಾಗಿ ದರ್ಶನ್ ಹಾಗೂ ಅವರ ಸಹಚರರ ಭೇಟಿಗೆ ಭಾನುವಾರ ಹೊರಗಿನವರಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ.
ದರ್ಶನ್ ಅವರಿಗಿಂತ ಮುಂಚಿತವಾಗಿ ಪವಿತ್ರಾಗೌಡ ಜೈಲು ಸೇರಿದ್ದಾರೆ. ಹೀಗಾಗಿ ಶನಿವಾರವೇ ಅವರ ಕುಟುಂಬಸ್ಥರು ಭೇಟಿ ನೀಡಿ ಬಟ್ಟೆ ನೀಡಿ ಹೋಗಿದ್ದರು. ಶನಿವಾರ ಸಂಜೆ ಜೈಲಿಗೆ ಪ್ರವೇಶಿಸಿದ ದರ್ಶನ್ ಅವರಿಗೆ ಕುಟುಂಬದವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಜೈಲಿನಲ್ಲಿ ದರ್ಶನ್ ಅವರ ಭೇಟಿಗೆ ಸೋಮವಾರ ಅವರ ಕುಟುಂಬ ಸದಸ್ಯರು ಹಾಗೂ ವಕೀಲರಿಗೆ ನಿಯಮಾನುಸಾರ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಸದ್ಯದಲ್ಲಿಯೇ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.