ಒಂದಷ್ಟು ಅನುಭವಿ ತಂಡ ಸೇರಿಕೊಂಡು ಮರ್ಯಾದೆ ಪ್ರಶ್ನೆ ಎಂಬ ಒಂದೊಳ್ಳೆ ಕಂಟೆಂಟ್ ಸಿನಿಮಾವನ್ನು ಪ್ರೇಕ್ಷಕರ ಎದುರು ಹರವಿಟ್ಟಿದ್ದಾರೆ. ಕಳೆದ ನವೆಂಬರ್ 22ರಂದು ಚಿತ್ರಮಂದಿರಕ್ಕೆ ಬಂದ ಈ ಚಿತ್ರ ಕಥೆ, ನಿರ್ದೇಶನ, ತಾರಾಬಳಗದ ಅಭಿನಯ, ಒಳ್ಳೆಯ ನಿರ್ಮಾಣ ಸೇರಿದಂತೆ ಎಲ್ಲಾ ಆಂಗಲ್ ಗಳಿಂದಲೂ ಸಿನಿರಸಿಕರನ್ನು ಆಕರ್ಷಿಸಿತ್ತು. ಪ್ರೇಕ್ಷಕರು ಮಾತ್ರವಲ್ಲದೇ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ 2024ರ ಅತ್ಯುತ್ತಮ ಚಿತ್ರ ಮರ್ಯಾದೆ ಪ್ರಶ್ನೆ ಈಗ ಅಮೇಜಾನ್ ಪ್ರೈಮ್ ಒಟಿಟಿಗೆ ಎಂಟ್ರಿ ಕೊಟ್ಟಿದ್ದು, ಇಲ್ಲಿಯೂ ಪ್ರೇಕ್ಷಕರ ಪ್ರೀತಿ ಪಡೆದುಕೊಳ್ತಿದೆ.
ಇಡೀ ಕುಟುಂಬ ಸಮೇತರಾಗಿ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದು, ಥಿಯೇಟರ್ ನಲ್ಲಿ ಇಂತಹ ಒಳ್ಳೆ ಚಿತ್ರವನ್ನು ಮಿಸ್ ಮಾಡಿಕೊಂಡ್ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗಟ್ಟಿ ಕಂಟೆಂಟ್ ಜೊತೆಗೆ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದ ಈ ಕಥೆಯನ್ನು ಅಮೇಜಾನ್ ಪ್ರೈಮ್ ನಲ್ಲಿ ಮಿಸ್ ಮಾಡಲೇಬೇಡಿ ಯಾಕಂದರೆ ಇದು ಕನ್ನಡದ ಮರ್ಯಾದೆ ಪ್ರಶ್ನೆ.
ಸದ್ದಿಲ್ಲದೇ ಅಮೆಜಾನ್ ಪ್ರೈಂಗೆ ಬಂದಿರುವ ಮರ್ಯಾದೆ ಪ್ರಶ್ನೆ ಚಿತ್ರವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಮಧ್ಯಮ ವರ್ಗದ ಬದುಕಿನ ಜಂಜಾಟದ ಕಥೆಯನ್ನು ಇಡೀ ಮನೆ ಮಂದಿ ಕುಳಿತು ಕಣ್ತುಂಬಿಕೊಳ್ಳುತ್ತಿದ್ದಾರೆ. ಆರ್ ಜೆ ಪ್ರದೀಪ್ ಹೆಣೆದ ಉಳ್ಳವರು ಮತ್ತು ಇಲ್ಲದವರ ನಡುವಿನ ಸೇಡಿನ ಕಥೆಯನ್ನು ನಾಗರಾಜ್ ಸೋಮಯಾಜಿ ಸೊಗಸಾಗಿ ತೆರೆಗೆ ತಂದಿದ್ದಾರೆ. ನಾಗರಾಜ್ ವಿಷನ್ ಗೆ ಸಕ್ಕತ್ ಸ್ಟುಡಿಯೋ ಸಾಥ್ ಕೊಟ್ಟಿತ್ತು.
ಸುನಿಲ್ ರಾವ್, ಶೈನ್ ಶೆಟ್ಟಿ, ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ ಸೇರಿದಂತೆ ಹಲವು ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮರ್ಯಾದೆ ಪ್ರಶ್ನೆ ಸಿನಿಮಾಗೆ ಸಂದೀಪ್ ವಲ್ಲೂರಿ ಛಾಯಾಗ್ರಹಣ ಹಾಗೂ ಅರ್ಜುನ್ ರಾಮು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀಕೆಂಡ್ ಮನೆಯಲ್ಲೇ ಕೂತು ನೋಡಲು ‘ಮರ್ಯಾದೆ ಪ್ರಶ್ನೆ’ ಇದೀಗ ಒಳ್ಳೆಯ ಆಯ್ಕೆ ಆಗಿದೆ.