ಈ ನವೆಂಬರ್ ತಿಂಗಳಲ್ಲಿ ಕನ್ನಡ ಸಿನಿಮಾ ಪ್ರೇಮಿಗಳಿಗೆ ಭರ್ಜರಿ ರಸದೌತಣ ಸಿದ್ಧವಾಗಿದೆ. ಈ ರಾಜ್ಯೋತ್ಸವ ತಿಂಗಳಿನಲ್ಲಿ ಒಂದಲ್ಲ ಎರಡಲ್ಲ ೧೬ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ತಮ್ಮ ಟ್ರೈಲರ್ ಮೂಲಕ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅತ್ಯಂತ ಆಸಕ್ತಿ ಹುಟ್ಟಿಸಿವೆ. ನವೆಂಬರ್ 12ರಂದು ಒಟ್ಟು ೬ ಸಿನಿಮಾಗಳು ತೆರೆಗೆ ಬಂದಿವೆ. ಇದರಲ್ಲಿ ಬಹುನಿರೀಕ್ಷಿತ ಲವ್ಲಿ ಸ್ಟಾರ್ ಅಭಿನಯದ ಪ್ರೇಮಂಪೂಜ್ಯಂ ಸಿನಿಪ್ರೇಮಿಗಳ ನಿರೀಕ್ಷೆಗೆ ಕಾರಣವಾಗಿತ್ತು. ಇದರ ಜೊತೆಗೆ ಟಾಮ್ ಅಂಡ್ ಜೆರ್ರಿ, ಹಿಟ್ಲರ್, ಬೈ 1 ಗೆಟ್ 1 ಫ್ರೀ, ಕಪೋಲ ಕಲ್ಪಿತಂ, ಯರ್ರಾಬಿರ್ರಿ ಕೂಡಾ ಬಿಡುಗಡೆಯಾಗಿವೆ. ಪ್ರೇಮ್ ಅಭಿನಯದ ೨೫ನೇ ಸಿನಿಮಾ ತ್ರಿಕೋನ ಪ್ರೇಮ ಕಥೆಯ ಪ್ರೇಮಂಪೂಜ್ಯಂನಲ್ಲಿ ೭ ವಿಭಿನ್ನ ಶೇಡ್ನಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದು ಚಿತ್ರದ ವಿಶೇಷ. ಇನ್ನು ಹಾರರ್ ಕಥಾ ಹಂದರದ ಕಪೋಲ ಕಲ್ಪಿತಂ, ರೂರಲ್ ಅಂಜನ್ ಮತ್ತು ಸೋನು ಪಾಟೀಲ್ ಅಭಿನಯದ ಯರ್ರಾಬಿರ್ರಿ ಚಿತ್ರಗಳೂ ಬಿಡುಗಡೆಯಾಗಲಿವೆ.
ಇನ್ನು ನವೆಂಬರ್ 18ರ ಗುರುವಾರ ಲಕ್ಷ್ಯ ತೆರೆಕಂಡರೆ, ನವೆಂಬರ್ 19ರ ಶುಕ್ರವಾರ ಒಂಬತ್ತನೇ ದಿಕ್ಕು, ಗರುಡ ಗಮನ ವೃಷಭ ವಾಹನ, 100, ಮುಗಿಲ್ ಪೇಟೆ, ಸ್ನೇಹಿತ, ನನ್ನ ಹೆಸರು ಕಿಶೋರ ಸಿನಿಮಾಗಳು ಬಿಡುಗಡೆಯಾಗಲಿವೆ. ವೃಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ನಲ್ಲಿ ರಗಡ್ ಕಥೆ ಹೊಂದಿರುವ ಗರುಡ ಗಮನ ವೃಷಭ ವಾಹನ ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗೇ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಗಿಲ್ ಪೇಟೆ ಸಹ ತೆರೆಕಾಣುತ್ತಿದ್ದ ಮತ್ತೊಂದು ಪ್ರೇಮಕಾವ್ಯಕ್ಕೆ ಸಾಕ್ಷಿಯಾಗಲಿ ಅಭಿಮಾನಿಗಳು ತವಕಿಸುತ್ತಿದ್ದಾರೆ. ರಮೇಶ್ ಅರವಿಂದ್ ನಿರ್ದೇಶಿಸಿ ಅಭಿನಯಿಸಿರುವ 100 ಚಿತ್ರ ಸಹ ಅಂದೇ ಬಿಡುಗಡೆಯಾಗಲಿದೆ.
ನವೆಂಬರ್ ೨೬ರಂದು ಗೋಲ್ಡaನ್ ಸ್ಟಾರ್ ಅಭಿನಯದ ಸಖತ್, ಗುರುರಾಜ್ ಕುಲಕರ್ಣಿ ನಾಡಗೌಡ ನಿರ್ದೇಶನದ ಅಮೃತಾ ಅಪಾರ್ಟ್ ಮೆಂಟ್ಸ್ ಹಾಗೂ ರವಿ ಆರ್ ಗರಣಿ ನಿರ್ಮಾಣದ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ಹೊಂದಿರುವ ಗೋವಿಂದ ಗೋವಿಂದ ಚಿತ್ರಗಳು ರಿಲೀಸ್ ಆಗುತ್ತಿವೆ. ಇವುಗಳಲ್ಲಿ ಅಮೃತಾ ಅಪಾರ್ಟ್ಮೆಂಟ್ ಮತ್ತು ಗಣೇಶ್ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಖತ್ ಟ್ರೈಲರ್ಗಳು ಸಾಕಷ್ಟು ಸದ್ದು ಮಾಡಿದ್ದು ಸಿನಿಪ್ರೇಮಿಗಳ ಕುತೂಹಲ ತಣಿಸಲಿವೆ. ಹಾಡುಗಳ ಮೂಲಕ ಜನಪ್ರಿಯವಾಗಿರುವ ಅಮೃತಾ ಅಪಾರ್ಟ್ಮೆಂಟ್ ಕೂಡಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವಾಗಿದ್ದು ಆಕ್ಸಿಡೆಂಟ್ ಮತ್ತು ರೆಡ್ಬಸ್ ಚಿತ್ರಗಳ ನಿರ್ಮಾಪಕರಾಗಿದ್ದ ಗುರುರಾಜ್ ಕುಲಕರ್ಣಿಯವರು ವಿಭಿನ್ನ ಕಥೆಯೊಂದಿಗೆ ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ಧರಿಸಿದ್ದು ಚಿತ್ರ ವಿಶೇಷಗಳಲ್ಲೊಂದು. ಒಟ್ನಲ್ಲಿ ರಾಜ್ಯೋತ್ಸವದ ತಿಂಗಳು ನವೆಂಬರ್ನಲ್ಲಿ ಕನ್ನಡ ಸಿನಿಪ್ರೇಮಿಗಳಿಗೆ ಭರ್ಜರಿ ಸಿನಿಜಾತ್ರೆ, ಇವುಗಳಲ್ಲಿ ಎಷ್ಟು ಗೆಲ್ಲುತ್ತವೋ? ಗಲ್ಲಾ ಪೆಟ್ಟಿಗೆಯಲ್ಲಿ ಎಷ್ಟು ದೋಚಿಕೊಳ್ಳುತ್ತವೋ? ಎಷ್ಟು ದಿಕ್ಕಾಪಾಲಾಗಿ ಓಡುತ್ತವೋ ಅನ್ನುವುದನ್ನು ವೀಕ್ಷಕ ಮಹಾಪ್ರಭುಗಳೇ ನಿಶ್ಚಯಿಸಬೇಕು.
-ರೂಪಾ ಮಾಲತೇಶ್,