14 ದಿನಗಳ ಕಾಲ ನಟ ಚೇತನ್ ಅಹಿಂಸಾಗೆ ನ್ಯಾಯಾಂಗ ಬಂಧನ ಆದೇಶ
ಬೆಂಗಳೂರು : ಸದಾ ಒಂದಲ್ಲಾ ಒಂದು ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಾ , ತಮಗೆ ತಪ್ಪನಿಸಿದ ವಿಚಾರಗಳ ವಿರುದ್ಧ ಧ್ವನಿ ಎತ್ತುವ ಸ್ಯಾಂಡಲ್ ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಆದಿನಗಳ ಚೇತನ್ ಇದೀಗ ಅರೆಸ್ಟ್ ಆಗಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪದಡಿ ನಟ ಚೇತನ್ರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ನಂತರ ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಚೇತನ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಮತ್ತೊಂದೆಡೆ ವಕೀಲ ಕೆ.ಬಾಲನ್ ಅವರು ಚೇತನ್ ಪರವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಟ್ಟೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಭಂದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಟ್ಟೀಟ್ ಆರೋಪದಡಿ ನಟ ಚೇತನ್ ರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಮ್ ಎನ್ ಅನುಚೇತ್ ಖಚಿತಪಡಿಸಿದ್ದಾರೆ.
ಇನ್ನೊಂದೆಡೆ ಅವರ ಈ ಟ್ವೀಟ್ 2 ವರ್ಷಗಳ ಹಳೆಯದ್ದು ಎಂದು ಹೇಳಲಾಲಗ್ತಿದೆ…
ಪತಿಯ ಬಂಧನವಾದ ತಕ್ಷಣವೇ ಈ ಬಗ್ಗೆ ಪತ್ನಿ ಮೇಘಾ ಪ್ರತಿಕ್ರಿಯಿಸಿದ್ದು, ಪೊಲೀಸರು ಯಾವುದೇ ನೋಟಿಸ್ ನೀಡದೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರು ಫೇಸ್ಬುಕ್ ಲೈವ್ನಲ್ಲಿ ಆತಂಕ ವ್ಯಕ್ತಪಡಿಸಿರುವ ಮೇಘಾ, ನನ್ನ ಪತಿ ಚೇತನ್ ಕಾಣುತ್ತಿಲ್ಲ ಎಂದಿದ್ದರು.
ಚೇತನ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ಮ್ಯಾನ್ ಕೂಡ ಫೋನ್ಗೆ ಸಿಗುತ್ತಿಲ್ಲ. ಇದು ಪೊಲೀಸರು ಮಾಡಿರುವ ಅಪಹರಣವಾಗಿದೆ. ಈ ದೇಶದ ಯಾವುದೇ ಪ್ರಜೆಯನ್ನು ವಿಚಾರಣೆಗಾಗಿ ಕರೆದೊಯ್ಯಬೇಕಾದರೆ ಅವರ ಕುಟುಂಬ ಸದಸ್ಯರಿಗೆ ತಿಳಿಸಬೇಕು. ಮೊದಲೇ ನೋಟಿಸ್ ನೀಡಬೇಕು ಎಂದು ಮೇಘಾ ಅವರು ಹೇಳಿದ್ದಾರೆ.
ಅವರಿಗೆ ನ್ಯಾಯಾಂಗದ ಸಹಾಯ ಪಡೆಯುವ ಹಕ್ಕು ಇದೆ. ಇದನ್ನು ಉಲ್ಲಂಘಿಸಿರುವ ಪೊಲೀಸರು ಉದ್ದೇಶಪೂರ್ವಕವಾಗಿ ಚೇತನ್ಗೆ ಕಿರುಕುಳ ನೀಡುತ್ತಿದ್ದಾರೆ. ಇದು ಸರಿಯಾದ ಮಾರ್ಗವಲ್ಲ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿವೆ.
ಚೇತನ್ ಕುಮಾರ್ ಅಹಿಂಸಾ ಅವರು ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ ಜನಾಂಗದವರಿಗೆ ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯಾಲಯ, ಸರ್ಕಾರ ಮತ್ತು ನಮ್ಮ ದೇಶದ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ, ಆಕ್ರೋಶ ಬರುವ ಹಾಗೆ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ ಹಾಗೂ ಇತ್ಯಾದಿಗಳನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ ಎಂದು ಚೇತನ್ ಅವರ ವಿರುದ್ಧ ಆರೋಪಿಸಲಾಗಿದೆ..