ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆಯುತ್ತಾ ಬರುತ್ತಿದೆ. ಅಗಲಿದ ನಟನ ನೆನಪಿಗೆ ಒಂದು ವಾರ ಮುಂಚೆಯೇ ಅವರ ಕುಟುಂಬದವರು ಮತ್ತು ಆಪ್ತರು, ಮೊದಲ ವರ್ಷದ ಪುಣ್ಯತಿಥಿಯನ್ನು ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ನೆರವೇರಿಸಿದ್ದಾರೆ.
ಜೂನ್ 14 ರಂದು ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ತಮ್ಮ 38ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಮೊದಲ ವರ್ಷದ ಪುಣ್ಯಸ್ಮರಣೆಯ ದಿನದಂದು ವಿಜಯ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ವಿಜಯ್ ಸಹೋದರರಾದ ಬಿ.ವೀರೂಪಾಕ್ಷ ಮತ್ತು ಸಿದ್ದೇಶಕುಮಾರ್ ಸಹೋದರನ ಮೂರ್ತಿಯನ್ನು ಅರ್ಥಗರ್ಭಿತವಾಗಿ ನಿರ್ಮಿಸಿದ್ದಾರೆ. ಇಂದು ಆ ಪುತ್ಥಳಿ ಪಂಚನಹಳ್ಳಿಯ ವಿಜಯ್ ಸಮಾಧಿ ಸ್ಥಳದಲ್ಲಿ ಅನಾವರಣಗೊಂಡಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ವಿಜಯ್ ಅವರ ಆಪ್ತ ಸ್ನೇಹಿತರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ನಿರ್ದೇಶಕ ವೀರೂ ಮಲ್ಲಣ್ಣ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು. ನಾನು ಅವನಲ್ಲ ಅವಳು ಸಿನಿಮಾದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿಯನ್ನ ಪಡೆದಿದ್ದರು.