Aniruiddha : ಮತ್ತೆ ಹೊಸ ಧಾರಾವಾಹಿಯಲ್ಲಿ ನಾಯಕರಾದ ‘ಆರ್ಯವರ್ಧನ್’..!!
ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮತ್ತೆ ಬಣ್ಣದ ಜಗತ್ತಿನಲ್ಲಿ ಮಿಂಚಿದ್ದ ಅನಿರುದ್ಧ @ ಆರ್ಯವರ್ಧನ್ ಅವರನ್ನ ಇತ್ತೀಚೆಗೆ ಧಾರಾವಾಹಿಯಿಂದ ಕೈ ಬಿಡಲಾಗಿತ್ತು..
ಕಿರುತೆರೆಯಲ್ಲಿ ಮತ್ತೆ ಶೈನ್ ಆಗಿದ್ದ ಅನಿರುದ್ಧ ಅವರಿಗೆ ಆರ್ಯವರ್ಧನ್ ಪಾತ್ರ ಹೇಳಿ ಮಾಡಿಸಿದಂತಿತ್ತು.. ಈ ಪಾತ್ರದಿಂದ ಅನಿರುದ್ಧ ಅವರು ಫೇಮಸ್ ಆಗಿದ್ದರು.. ಆದ್ರೆ ದಿಢೀರ್ ಇವರನ್ನ ಧಾರಾವಾಹಿಯಿಂದ ಕೈಬಿಟ್ಟಿದ್ದು , ಇವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.. ಸಿನಿಮಾ ನಿರ್ದೇಶಕರ ಜೊತೆಗೆ ಕಿರಿಕ್ ಮಾಡಿಕೊಂಡ ಕಾರಣಕ್ಕೆ ಇವರನ್ನ ಕೈಬಿಡಲಾಗಿತ್ತು ಎನ್ನಲಾಗಿತ್ತು. ಅಭಿಮಾನಿಗಳು ಅನಿರುದ್ಧ ಪರ ಅಭಿಯಾನವನ್ನೂ ಮಾಡಿದ್ದುಂಟು. ಇವರ ಪಾತ್ರಕ್ಕೆ ಇದೀಗ ಹರೀಶ್ ರಿಪ್ಲೇಸ್ ಆಗಿದ್ದಾರೆ..
ಅಂದ್ಹಾಗೆ ಕಿರುತೆರೆಯಿಂದಲೇ ಅವರನ್ನ ಬ್ಯಾನ್ ಮಾಡಲಾಗಿದೆ ಎಂದೇ ಹೇಳಲಾಗಿತ್ತು.. ಆದ್ರೀಗ ಮತ್ತೆ ಕಿರುತೆರೆಗೆ ಅನಿರುದ್ಧ ಅವರು ಜಬರ್ ದಸ್ತ್ ಎಂಟ್ರಿಕೊಟ್ಟಿದ್ದಾರೆ..
ಹೌದು..!
ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧಗಾಗಿ ಯಾರೂ ಧಾರಾವಾಹಿ ಮಾಡಬಾರದು ಎಂದು ಅಲಿಖಿತ ಫಾರ್ಮಾನು ಹೊರಡಿಸಿತ್ತು. ಯಾವುದೇ ವಾಹಿನಿಗಳು ಕೂಡ ಇವರಿಗೆ ಕೆಲಸ ಕೊಡದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇದನ್ನೆಲ್ಲಾ ದಾಟಿ ಹೊಸ ಧಾರವಾಹಿಯಲ್ಲಿ ಅನಿರುದ್ಧ ನಾಯಕರಾಗಿ ನಟಿಸುತ್ತಿದ್ದಾರೆ..
ಉದಯವಾಹಿನಿಯಲ್ಲಿ ಸೂರ್ಯವಂಶ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಅನಿರುದ್ಧ ಅವರೇ ಸ್ಪಷ್ಟ ಪಡಿಸಿದ್ದಾರೆ. ತಾವು ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನಿರುದ್ಧ ಅವರು ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ಸೂರ್ಯವಂಶದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ ಎಂದು ಬರೆದು ತಮ್ಮನ್ನ ವಿರೋಧಿಸಿ , ಕಿರುತೆರೆಯಲ್ಲಿ ಯಾರೂ ಪ್ರಾಜೆಕ್ಟ್ ಕೊಡಬಾರದೆಂದು ಪಣ ತೊಟ್ಟಿದ್ದವರಿಗೂ ಉತ್ತರ ಕೊಟ್ಟಿದ್ದಾರೆ..