Sandalwood : ‘ಹೊಂದಿಸಿ ಬರೆಯಿರಿ’ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಫೆಬ್ರವರಿ 10ರಂದು ಬಿಡುಗಡೆಯಾಗುತ್ತಿದೆ. ಹಾಡುಗಳ ಮೂಲಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಸಿನಿಮಾ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಮಾಡುವ ಮೂಲಕ ಪ್ರೇಕ್ಷಕರಿಗೆ ಸಿನಿಮಾವನ್ನು ತಲುಪಿಸುವ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಅಂಚೆ ಪತ್ರದ ಮೂಲಕ ಕರುನಾಡಿನ ಮನೆ ಮನೆ ತಲುಪಲಿದೆ.
ಸಿನಿಮಾ ಮಾಡಿದ ಮೇಲೆ ಅದನ್ನು ಪ್ರೇಕ್ಷಕರಿಗೆ ತಲುಪಿಸುವುದು ದೊಡ್ಡ ಜವಾಬ್ದಾರಿ ಆ ಕೆಲಸದಲ್ಲಿ ‘ಹೊಂದಿಸಿ ಬರೆಯಿರಿ’ ಚಿತ್ರತಂಡ ನಿರತವಾಗಿದೆ. ಕ್ರಿಯೇಟಿವ್ ಆಗಿ ಸಿನಿಮಾ ಪ್ರಚಾರಕ್ಕಿಳಿದಿದೆ. ಅಂಚೆ ಪತ್ರದಲ್ಲಿ ಸಿನಿಮಾ ಬಗ್ಗೆ ಬರೆದು ಅದನ್ನು ಚಿತ್ರತಂಡ ಮನೆ ಮನೆಗೆ ಕೊಡುವ ಮೂಲಕ ತಮ್ಮ ಸಿನಿಮಾಗೆ ಆಮಂತ್ರಣ ನೀಡುತ್ತಿದೆ. ಇದರ ಜೊತೆಗೆ ಚಿತ್ರತಂಡ ಹದಿನೈದು ಸಾವಿರಕ್ಕೂ ಹೆಚ್ಚು ಮನೆ ವಿಳಾಸಗಳನ್ನು ಸಂಗ್ರಹಿಸಿ ಆ ಮನೆಗಳಿಗೆ ಪೋಸ್ಟ್ ಕಾರ್ಡ್ ಕಳಿಸಿಕೊಡುವ ಸಿನಿಮಾವನ್ನು ತಲುಪಿಸುವ ಕೆಲಸ ಮಾಡುತ್ತಿದೆ.
ಪತ್ರ ಅಂದ್ರೆ ಒಂದು ಅವಿನಾಭಾವ ಹಾಗೂ ಆತ್ಮೀಯ ಸಂಬಂಧವಿದೆ. ಆದ್ರಿಂದ ನಮ್ಮ ಸಿನಿಮಾವನ್ನು ಪತ್ರದ ಮೂಲಕ ಜನರಿಗೆ ತಲುಪಿಸಲು ತಯಾರಿ ಮಾಡಿಕೊಂಡಿದ್ದೇವೆ. ಪತ್ರದಲ್ಲಿ ಸಿನಿಮಾ ಬಗ್ಗೆ ಬರೆದು ಅದನ್ನು ನಾವು ಕಲೆಕ್ಟ್ ಮಾಡಿಕೊಂಡಿರುವ ವಿಳಾಸಕ್ಕೆ ಕಳಿಸಿಕೊಡಲಾಗುವುದು. ನಿನ್ನೆ ಚಿತ್ರತಂಡ ವಿಜಯನಗರದಲ್ಲಿ ಈ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಪತ್ರ ತಲುಪಲಿದೆ ಎಂದು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಿಳಿಸಿದ್ದಾರೆ.
ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲರ್ ಫುಲ್ ಕಲಾವಿದರ ಮುಖ್ಯಭೂಮಿಕೆಯಿದೆ. ಶಾಂತಿ ಸಾಗರ್ ಹೆಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.