ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾದ ಟೈಟಲ್ (Title) ವಿವಾದ ಇತ್ತೀಚೆಗೆ ತಾರಕಕ್ಕೆ ಏರಿತ್ತು. ಇದು ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಸದ್ಯ ನಟಿ ರಮ್ಯಾ ಪರ ತೀರ್ಪು ಬಂದಿದೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಟೈಟಲ್ ನಮ್ಮದು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ (Rajendra Singh Babu) ಬಾಬು ಸಿಟಿ ಸಿವಿಲ್ ಕೋರ್ಟ್ (Cour) ಗೆ ಅರ್ಜಿ ಸಲ್ಲಿಸಿದ್ದರು. ತಾವು ಇದೇ ಹೆಸರಿನ ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿರುವ ಮತ್ತು ಈ ಶೀರ್ಷಿಕೆಯನ್ನು ಬೇರೆಯೊಬ್ಬರು ಬಳಸುತ್ತಿದ್ದು, ಅದನ್ನು ತಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ನಟಿ ರಮ್ಯಾ (Ramya) ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ವಿವಾದಕ್ಕೆ ಗುರಿಯಾಗಿತ್ತು. ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು ಗೊತ್ತಾಗಿತ್ತು. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮಾಡುತ್ತಿರುವ ಬಿ.ಕೆ.ಗಂಗಾಧರ್ ಅವರು ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ, ರಮ್ಯಾ ಸಿನಿಮಾ ಮಾಡುತ್ತೇನೆ ಎಂದಾಗ, ಅವರಿಗೆ ಆ ಟೈಟಲ್ ಅನ್ನು ವರ್ಗಾಯಿಸಿದ್ದಾರೆ ಎಂದು ಸ್ವತಃ ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ತಿಳಿಸಿದ್ದರು.
ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಕೂಡ ಪತ್ರ ಬರೆದಿದ್ದರು.