ಟೈಟಲ್ : 100.
ತಾರೆಯರು: ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೊಬ್ರಾಜ್, ವಿಶ್ವ ಕರ್ಣ.
ನಿರ್ಮಾಪಕರ : ರಮೇಶ್ ರೆಡ್ಡಿ.
ನಿರ್ದೇಶನ : ರಮೇಶ್ ಅರವಿಂದ್.
ಸಂಗೀತ : ರವಿ ಬಸ್ರೂರು.
ಸದ್ಯ ಕಥೆಯಲ್ಲಿ ಶಕ್ತಿ ಇದ್ದರೆ ಸಾಕು.. ಹೀರೋ ಯಾರೆಂಬ ಭೇದವಿಲ್ಲದೆ ಪ್ರೇಕ್ಷಕರು ಥಿಯೇಟರ್ಗೆ ಬರುತ್ತಿದ್ದಾರೆ. ಹಾಗಾಗಿಯೇ ವಿಭಿನ್ನ ಕಥೆಗಳು ಬೆಳ್ಳಿಪರದೆಗೆ ಅಪ್ಪಳಿಸುತ್ತಿದೆ. ಅಂತಹ ಹೊಸ ಪರಿಕಲ್ಪನೆಯ ಚಿತ್ರವೇ ‘100’. ಸೈಬರ್ ಕ್ರೈಂ ಸುತ್ತ ಸುತ್ತುವ ಕಥೆಯಲ್ಲಿ ಒಂದು ಕುಟುಂಬವನ್ನು ಕಟ್ಟಿಹಾಕಿರೋದು ಸಿನಿಮಾದ ವಿಶೇಷ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್, ಟ್ರೇಲರ್ ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಮೇಲೆ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಹಾಗಾದರೆ‘100’ ಎಷ್ಟರ ಮಟ್ಟಿಗೆ ಆ ನಿರೀಕ್ಷೆಗಳನ್ನು ತಲುಪಿದೆ ಎಂಬೊದನ್ನ ನಮ್ಮ ವಿಮರ್ಶೆಯಲ್ಲಿ ನೋಡೋಣ.
ಕಥೆ : ರಮೇಶ್ ಅರವಿಂದ್ ಅವರು ವಿಷ್ಣು ಹೆಸರಿನಲ್ಲಿ ಪ್ರಾಮಾಣಿಕ ಪೊಲೀಸ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಮೇಲಾಧಿಕಾರಿಯ ಸೂಚನೆಯಂತೆ ಕೆಲ ಫೋನ್ ಗಳನ್ನ ಟ್ಯಾಪ್ ಮಾಡ್ತಾ ಇರ್ತಾರೆ. ಹೀಗೆ ಫೇಸ್ ಬುಕ್ ಮೂಲಕ ಪರಿಚಯ ಬೆಳೆಸಿಕೊಂಡು ಹುಡುಗಿರಿಗೆ ಮೋಸ ಮಾಡೋ ಯುವಕ (ಹರ್ಷ) ಫೋನ್ ಅನ್ನ ವಿಷ್ಣು ಟ್ಯಾಪ್ ಮಾಡ್ತಾರೆ. ಈ ವೇಳೆ ವಿಷ್ಣು ಹೆಂಡತಿ, ಆ ಫೇಸ್ ಬುಕ್ ಟ್ರ್ಯಾಪರ್ ಜೊತೆ ಮಾತಾಡೋದು ಗೊತ್ತಾಗುತ್ತೆ.. ಅಲ್ಲಿ ಕಥೆ ಶುರುವಾಗುತ್ತೆ…
ಒಬ್ಬ ಪೊಲೀಸ್ ಅಧಿಕಾರಿಯಾಗಿ ವಿಷ್ಣು ಪ್ರಕರಣವನ್ನ ಹೇಗೆ ಬಗೆಹರಿಸ್ತಾನೆ ಅನ್ನೋದು ಸಿನಿಮಾದ ಕಥೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿ ತೇಲುತ್ತಿರುವರಿಗೆ ಒಂದೊಳ್ಳೆ ಮೆಸೇಜ್..
ಒಂದು ಹಂತದಲ್ಲಿ ಆ ಫೇಸ್ ಬುಕ್ ಟ್ರ್ಯಾಪರ್ ಹಾಗೂ ವಿಷ್ಣು ಮುಖಾಮುಖಿ ಆಗ್ತಾರೆ.. ಇಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ವಿಷ್ಣು, ಹರ್ಷಗೆ ವಾರ್ನ್ ಮಾಡ್ತಾನೆ. ಆಗ ಹೈಲಿ ಇಂಟಲಿಜಂಟ್ ಆಗಿರುವ ಹರ್ಷ.. ಅಲ್ಲಿಯವರೆಗೂ ರಾಮನಾಗಿ ಪ್ರಮಾಣಿಕ ಪೊಲೀಸ್ ಅಧಿಕಾರಿ ಎಲ್ಲರ ಮುಂದೆ ಇದ್ದ ವಿಷ್ಣುವಿನ ಕೃಷ್ಣನ ಅವತಾರವನ್ನ ಬಯಲು ಮಾಡ್ತಾನೆ.
ಆ ಅವತಾರ ಯಾವುದು..? ವಿಷ್ಣು ಹಾಗೇ ಮಾಡೋಕೆ ಕಾರಣವೇನು..? ಅನ್ನೋದನ್ನ ಸಿನಿಮಾದ ದ್ವಿತೀಯಾರ್ಧದಲ್ಲ ನೋಡಬಹುದು. ಇಲ್ಲಿಂದ ಇನ್ನೊಂದು ಆಟ ಶುರುವಾಗುತ್ತೆ.. ಇಲ್ಲಿ ವಿಷ್ಣುವಿನ ಪಾತ್ರದಲ್ಲಿ ರಮೇಶ್ ಅವರ ಅಭಿನಯ ಹಾಗೇ ಹರ್ಷನ ಪಾತ್ರದಲ್ಲಿ ಹೊಸ ಪರಿಚಯ ವಿಶ್ವಕರ್ಣ ಅವರ ನಟನೆ ಎಲ್ಲರಿಗೂ ಇಷ್ಟ ಆಗುತ್ತೆ.. ಇಲ್ಲಿ ಇಬ್ಬರೂ ವಿಲನ್ ಗಳಾಗಿಯೇ ಕಾಣಿಸಿಕೊಳ್ತಾರೆ ಅದು ಸಿನಿಮಾದ ಹೈಲೆಟ್..
ನಿರ್ದೇಶನ-ಸ್ಕ್ರೀನ್ ಪ್ಲೇ..
ಕಥೆ ತಮಿಳಿನ ಚಿತ್ರದ್ದೇಯಾದರೂ ಶೇಕಡಾ 50ರಷ್ಟು ಬದಲಾವಣಯೊಂದಿಗೆ ರಮೇಶ್ ಅರವಿಂದ್ ಅವರು ಸಿನಿಮಾವನ್ನ ತೆರೆಮೇಲೆ ತಂದಿದ್ದಾರೆ. ಮೊದಲಾರ್ಧದಲ್ಲಿ ಮೂಡೂ ಪ್ರಶ್ನೆಗಳಿಗೆ ದ್ವಿತೀಯಾರ್ಧದಲ್ಲಿ ಉತ್ತರ ಕೊಟ್ಟಿದ್ದಾರೆ. ಸಿನಿಮಾ ಶುರುವಾಗಿನಿಂದ ಹಿಡಿದು ಮುಗುಯೋವರೆಗೂ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವ ಸ್ಕ್ರಿನ್ ಪ್ಲೇ ಚೆನ್ನಾಗಿದೆ. ಹಾಗೇ ಫ್ಯಾಮಿಲಿ ಸೆಂಟಿಮೆಂಟ್ಸ್, ಕಾಮಿಡಿ, ಸಸ್ಪೇನ್ಸ್ ಸಿನಿಮಾದ ತೂಕವನ್ನ ಹೆಚ್ಚಿಸಿವೆ. ಒಟ್ಟಾರೆ ಎಲ್ಲೂ ಬೇಜಾರಗದೇ ಕೊಟ್ಟ ದುಡ್ಡಿಗೆ ಮೋಸ ಇಲ್ಲ ಎನ್ನುವಂತೆ ಸಿನಿಮಾವನ್ನ ತೆಗೆಯುವಲ್ಲಿ ರಮೇಶ್ ಸರ್ ಯಶಸ್ವಿಯಾಗಿದ್ದಾರೆ. ಸಿನಿಮಾ ಇಷ್ಟು ಬೇಗ ಮುಗೀತಾ.. ಅನ್ನುವಂತಿದೆ. ನಿರ್ಮಾಪಕರಾದ ರಮೇಶ್ ರೆಡ್ಡಿ ಕೂಡ ಎಲ್ಲೂ ರಾಜಿ ಆಗದೇ ಸಿನಿಮಾ ನಿರ್ಮಿಸಿದ್ದಾರೆ.
ನಟ-ನಟಿಯರ ಅಭಿನಯ ಹೇಗಿದೆ.
ವಿಷ್ಣು ಪಾತ್ರದಲ್ಲಿ ರಮೇಶ್ ಅವರ ಅಭಿನಯಕ್ಕೆ ಸಲಾಂ ಎನ್ನಲೇಬೇಕು. ಯಾಕಂದರೇ ಪ್ರಾಮಾಣಿಕ ಪೊಲೀಸ್ ಆಗಿ.. ಅಸಹಾಯಕ ಅಣ್ಣನಾಗಿ ಪ್ರೀತಿಯ ಗಂಡನಾಗಿ ರಮೇಶ್ ಅವರು ಅದ್ಭುತವಾಗಿ ನಟಿಸಿದ್ದಾರೆ.
ರಮೇಶ್ ಅವರ ಬಳಿಕ ಸಿನಿಮಾದಲ್ಲಿ ಬೆಸ್ಟ್ ಎನಿಸಿಕೊಳ್ಳೋದು ಹರ್ಷ ಕ್ಯಾರಕ್ಟರ್.. ಡ್ರಗ್ ಅಡಿಕ್ಟ್.. ಹ್ಯಾಕರ್ ಆಗಿ.. ಮದವೇರಿದ ಬ್ಯಾಡ್ ಬಾಯ್ ಆಗಿ ಕೃಷ್ಣ ಅದ್ಭತವಾಗಿ ನಟಿಸಿದ್ದಾರೆ. ಸಿನಿಮಾ ಪೂರ್ತಿ ಅವರ ಅಭಿನಯ ನೋಡೋಕೆ ಇಷ್ಟ ಅಗುತ್ತೆ.
ಇನ್ನುಳಿದಂತೆ ವಿಷ್ಣು ತಂಗಿ ಪಾತ್ರದಲ್ಲಿ ರಚಿತಾ ರಾಮ್.. ಹೆಂಡತಿ ಪಾತ್ರದಲ್ಲಿ ಪೂರ್ಣ.. ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ, ಶೊಬ್ರಾಜ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
ಸಂಗೀತ
ಮುಖ್ಯವಾಗಿ ಈ ಸಿನಿಮಾದಲ್ಲಿ ಮೆಚ್ಚಿಕೊಳ್ಳಬೇಕಾದ ವಿಷಯ ಅಂದರೇ ಅದು ಹಿನ್ನಲೆ ಸಂಗೀತ. ರವಿ ಬಸ್ರೂರು ಅವರ ಹಿನ್ನಲೆ ಸಂಗೀತ ಸಿನಿಮಾಗೆ ಪ್ಲಸ್ ಪಾಯಿಂಟ್.. ಸಿನಿಮಾ ಆರಂಭದಿಂದ ಕೊನೆಯವರೆಗೂ ರವಿ ಬಸ್ರೂರು ಅವರ ಹಿನ್ನಲೆ ಸಂಗೀತ ಸಿನಿಮಾದ ಕಿಕ್ ಹೆಚ್ಚಿಸುತ್ತೆ.
ಪ್ಲಸ್ ಪಾಯಿಂಟ್
ಈ ಸಿನಿಮಾಗೆ ಪ್ಲಸ್ ಪಾಯಿಂಟ್ ಅಂದ್ರೆ ಕಥೆ, ರಮೇಶ್ ಅವರ ನಿರ್ದೇಶನ, ಚಿತ್ರಕಥೆ, ಸಂಗೀತ, ಕಾಮಿಡಿ, ರಮೇಶ್ ಅರವಿಂದ್, ವಿಶ್ವ ಕರ್ಣ ಅವರ ಅಭಿನಯ.
ಮೈನಸ್ ಪಾಯಿಂಟ್
ಸಿನಿಮಾದಲ್ಲಿ ಪಾಸಿಟಿವ್ ಪಾಯಿಂಟ್ ಗಳೇ ಹೆಚ್ಚಿದೆ. ಆದ್ರೂ ಮೊದಲಾರ್ದದಲ್ಲಿ ರಮೇಶ್ ಅರವಿಂದ್, ಪೂರ್ಣ ಅವರ ಲವ್ ಸ್ಟೋರಿ ಪ್ಲ್ಯಾಶ್ ಬ್ಯಾಕ್ ಅನವಶ್ಯಕ ಅನಿಸುತ್ತೆ. ಯಾಕಂದ್ರೆ ಅದು ಅಂಕಲ್-ಆಂಟಿ ಲವ್ ಸ್ಟೋರಿ ಅನಿಸುತ್ತೆ.
ಇನ್ನುಳಿದಂತೆ ಛಾಯಾಗ್ರಹಣ, ಎಡಿಟಿಂಗ್ ಚೆನ್ನಾಗಿದ್ದು, ಗುರು ಕಶ್ಯಪ್ ಅವರ ಸಂಭಾಷಣೆ ಕಚಗುಳಿ ಇಡುತ್ತಾ ಕಥೆ ಹೇಳುತ್ತೆ.
ಒಟ್ಟಾರೆ ಎಲ್ಲೂ ಬೋರ್ ಆಗದೇ.. ಮುಜುಗರ ಇಲ್ಲದೇ… ಖುಷಿ ಖುಷಿಯಾಗಿ 100 ಸಿನಿಮಾವನ್ನ ನೋಡಬಹುದು. ಒಂದಂತೂ ಗ್ಯಾರಂಟಿ ಸಿನಿಮಾ ಮುಗಿದ ಮೇಲೆ ನೀವು ಕೂಡ ಒಮ್ಮೆ ಫೇಸ್ ಬುಕ್ ನಲ್ಲಿ ಕಣ್ಣಾಡಿಸ್ತೀರಾ… ಅಷ್ಟು ಚೆನ್ನಾಗಿ ರಮೇಶ್ ಅರವಿಂದ್ ಅವರು 100 ಸಿನಿಮಾ ಮೂಲಕ ಮೆಜೇಸ್ ಕೊಟ್ಟಿದ್ದಾರೆ. 100 ಪರ್ಸೆಂಟ್ ಇದು ಕಂಟೆಂಟ್ ಇರೋ ಸಿನಿಮಾ ತಪ್ಪದೇ ನೀವೂ ನೋಡಿ.. ಯಾಕಂದರೇ ಸದ್ಯದ ಪರಿಸ್ಥಿತಿಗೆ ಇಂತಹ ಸಿನಿಮಾಗಳ ಅವಶ್ಯಕತೆ ಇದೆ. ನಮ್ಮಲ್ಲಿ ಆ ಥರ ಸಿನಿಮಾ ಬರ್ತಿಲ್ಲ. ಈ ಥರ ಸಿನಿಮಾ ಬರ್ತಿಲ್ಲ ಅನ್ನೋರು.. ಈ ಸಿನಿಮಾ ನೋಡ್ಲೇಬೇಕು.
ಈ ಸಿನಿಮಾಗೆ ನಮ್ಮ ರೇಟಿಂಗ್ 10ಕ್ಕೆ 08