ಬೆಂಗಳೂರು ಫಿಲ್ಮ್ ಫೆಸ್ಟಿವಲ್ ನಲ್ಲಿ “ಪೆದ್ರೋ” ಗೆ ಸಿಗಲಿಲ್ಲ ಮನ್ನಣೆ – ರಿಷಬ್ ಅಸಮಧಾನ…
ಬೆಂಗಳೂರನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ವಿವಾದಗಳು ತಲೆ ಎತ್ತಿವೆ. ಅದರಲ್ಲೂ ಕರ್ನಾಟಕದಲ್ಲಿ ನಡೆಯುತ್ತಿರುವ ಸಿನಿಮಾ ಉತ್ಸವದಲ್ಲಿ ಕನ್ನಡದ ಸಿನಿಮಾಗಳಿಗೆ ಅನ್ಯಾಯವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಮಾ.3ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಸಿನಿಮೋತ್ಸವ ಜಗತ್ತಿನ ಹಲವು ಭಾಷೆಯ ನೂರಾರು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ತಯಾರಾದ ‘ಪೆದ್ರೂ’ ಚಿತ್ರಕ್ಕೆ ಮನ್ನಣೆ ದೊರಕಿಲ್ಲ.
ಜಾಗತಿಕವಾಗಿ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಮೆಚ್ಚುಗೆ ಪಡೆದ ‘ಪೆದ್ರೂ’ ಸಿನಿಮಾವನ್ನು ಬೆಂಗಳೂರು ಸಿನಿಮೋತ್ಸವದಲ್ಲಿ ಆಯ್ಕೆ ಮಾಡದೇ ಇರುವುದಕ್ಕೆ ನಿರ್ಮಾಪಕ ರಿಷಬ್ ಶೆಟ್ಟಿ, ನಿರ್ದೇಶಕ ನಟೇಶ್ ಹೆಗಡೆ ಬೇಸರಿಸಿಕೊಂಡಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ ಅವರು ಬಹಿರಂಗ ಪತ್ರ ಬರೆದು ಅಸಮಧಾನ ಹೊರಹಾಕಿದ್ದಾರೆ.
ರಿಷಬ್ ಶೆಟ್ಟಿ ಬರೆದ ಪತ್ರದ ಸಾರಾಂಶ ಇಲ್ಲಿದೆ…
‘ಎಲ್ಲರಿಗೂ ನಮಸ್ಕಾರ.. ರಿಷಬ್ ಶೆಟ್ಟಿ ಫಿಲ್ಮ್ ಸಂಸ್ಥೆಯಿಂದ ನಿರ್ಮಾಣವಾದ ಪೆದ್ರೊ ಸಿನಿಮಾದ ಟ್ರೇಲಲ್ಗೆ ನೀವು ನೀಡಿದ ಪ್ರತಿಕ್ರಿಯೆ ನಮ್ಮನ್ನು ಪುಳಕಿತರನ್ನಾಗಿಸಿದೆ. ವರ್ಷದ ಹಿಂದೆ ನಾವು ಈ ಸಿನಿಮಾದ ಕಥೆಯನ್ನು ಯೋಚಿಸಿದಾಗ ಅಥವಾ ಮಲೆನಾಡಿನ ಮಳೆಯಲ್ಲಿ ಚಿತ್ರೀಕರಿಸುತ್ತಿದ್ದಾಗ ಖಂಡಿತವಾಗಿ ಇದು ಪಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಪ್ರಶಂಸೆಯ ಬಗ್ಗೆ ಯೋಚಿಸಿರಲಿಲ್ಲ. ಬೇರೆ ಬೇರೆ ಊರಿನಿಂದ ಬಂದ ನಾವು ನಮ್ಮದೇ ಕಥೆಯನ್ನು ನಮ್ಮದೇ ರೀತಿಯಲ್ಲಿ ಹೇಳಬೇಕು ಎಂಬುದಷ್ಟೇ ನಮಗಿದ್ದ ಗಟ್ಟಿ ನಿರ್ಧಾರ’
‘ಮೊನ್ನೆಯಷ್ಟೇ ಆಯೋಜಿಸಿದ್ದ ನಮ್ಮ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ಗೆ ಆಗಮಿಸಿ ಸಿನಿಮಾವನ್ನು ಬಹುವಾಗಿ ಮೆಚ್ಚಿದ ಗಿರೀಶ್ ಕಾಸರವಳ್ಳಿ, ಎಂ.ಎಸ್. ಸತ್ಯು, ವಸಂತ ಮೋಕಾಶಿ, ವಿವೇಕ್ ಶಾನಭಾಗ್, ಕವಿತಾ ಲಂಕೇಶ್ ಹಾಗೂ ಇನ್ನಿತರ ಹಿರಿಯರು ತೋರಿದ ಪ್ರೀತಿ ನಮ್ಮ ಹೃದಯವನ್ನು ಆರ್ದೃ ಗೊಳಿಸಿದೆ. ಜನರೊಂದಿಗೆ ನಮ್ಮ ಸಿನಿಮಾವನ್ನು ಹಂಚಿಕೊಳ್ಳುವ ಆಸೆಯನ್ನು ಇಮ್ಮಡಿಯಾಗಿಸಿದೆ’
‘ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ವಿಮರ್ಶಕರಿಂದ ಪ್ರಶಂಸೆ ಪಡೆದ ಪೆದ್ರೊ, ನಮ್ಮ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ. ನಮ್ಮ ಸಿನಿಮಾ ಚಿತ್ರೋತ್ಸವದಿಂದ ಅವಕಾಶ ವಂಚಿತವಾಯಿತು ಎಂಬುದು ಎಷ್ಟು ಸತ್ಯವೋ ನಮ್ಮದೇ ಊರಿನ ಜನ ತಮ್ಮದೇ ಸಿನಿಮಾವನ್ನು ವೀಕ್ಷಿಸಲು ವಂಚಿತರಾದರು ಎಂಬುದು ಅಷ್ಟೇ ಸತ್ಯ. ಸಿನಿಮಾ ಎಂಬ ನದಿಗೆ ಎಲ್ಲ ತೊರೆಗಳೂ ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ
ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ. ನಾವೆಲ್ಲ ಇವತ್ತು ಕುಳಿತಿರುವ ಜಾಗ ನಮಗೆ ಸಿನಿಮಾ ಎಂಬ ಮಾಧ್ಯಮ ನೀಡಿದ ಭಕ್ಷೀಸು. ಒಂದು ಸಿನಿಮಾ ಜನರಿಗೆ ತಲುಪುವುದನ್ನು ತಪ್ಪಿಸುತ್ತೇವೆ ಎಂದುಕೊಂಡರೆ ನೀರನ್ನು ಹಿಮ್ಮುಖ ಹರಿಸುತ್ತೇವೆ ಎಂದುಕೊಂಡಂತೆ. ನಮ್ಮನ್ನು ಎಡೆಬಿಡದೆ ‘ಸಿನಿಮಾವನ್ನು ಎಲ್ಲಿ ನೋಡಬಹುದು’ ಎಂದು ಕೇಳುತ್ತಿರುವ ಪ್ರೀತಿಯ ಜನರಲ್ಲಿ ನಮ್ಮದು ಒಂದೇ ಕೋರಿಕೆ. ದಯವಿಟ್ಟು ಹೀಗೆ ಎಂದಿಗೂ ನಮ್ಮೊಂದಿಗಿರಿ. ಪೆದ್ರೊವನ್ನು ನಿಮ್ಮೆಡೆಗೆ ತಲುಪಿಸುವುದು ನಮ್ಮ ಭದ್ಧತೆ’ ಎಂದು ರಿಷಬ್ ಶೆಟ್ಟಿ ಪತ್ರ ಬರೆದು ತಮ್ಮ ಅಸಮಧಾನವನ್ನ ತೋಡಿಕೊಂಡಿದ್ದಾರೆ.
No recognition at Bangalore film Festival Rishabh Shetty upset at open letter.