ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದಿಂದ ಹೊರಗುಳಿದ ಕನ್ನಡ ಸಿನಿಮಾಗಳು
ಇಂದಿನಿಂದ ( ಮಾರ್ಚ್ 3 ) 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಚಾಲನೆ ಸಿಗಲಿದೆ.. ಆದ್ರೆ ಈ ಉತ್ಸವದಿಂದ ಒಳ್ಳೊಳ್ಳೆ ಕನ್ನಡ ಸಿನಿಮಾಗಳನ್ನ ಕೈಬಿಟ್ಟಿರುವುದು ಸಿನಿಮಾ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ.. ಹಲವು ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ, ಮನ್ನಣೆ ಪಡೆದಿರುವ ಕನ್ನಡ ಸಿನಿಮಾ ‘ಪೆದ್ರೊ’ ಈ ಬಾರಿಯ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿಲ್ಲ.
ನಟೇಶ ಹೆಗಡೆ ನಿರ್ದೇಶನದ ಪೆದ್ರೊ ಸಿನಿಮಾಕ್ಕೆ ಸಿನಿಮೋತ್ಸವದಿಂದ ಹೊರಗೆ ಇಡಲಾಗಿದೆ. ಸಿನಿಮಾವು ಧಾರ್ಮಿಕ ಸೂಕ್ಷ್ಮ ವಿಚಾರಗಳ ಕತೆಯನ್ನು ಹೊಂದಿದೆ. ಹಾಗಾಗಿ ಸಿನಿಮಾವನ್ನು ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿಲ್ಲ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದ್ದಾರೆ.
ಜೊತೆಗೆ ಕನ್ನಡದ ನೀಲಿ ಹಕ್ಕಿ ಸಿನಿಮಾವನ್ನು ಸಹ ಸಿನಿಮೋತ್ಸವದಿಂದ ದೂರವಿಡಲಾಗಿದೆ.. ಗಣೇಶ್ ಹೆಗಡೆ ನಿರ್ದೇಶನದ ಈ ಸಿನಿಮಾ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್, ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವ, ಮೆಲ್ಬೋರ್ನ್ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ಆದ್ರೆ ಬೆಂಗಳೂರು ಸಿನಿಮೋತ್ಸವದಿಂದ ಸಿನಿಮಾವನ್ನು ಹೊರಗಿಡಲಾಗಿದೆ. ಅಲ್ಲದೇ ಬಿಎಂ ಗಿರಿರಾಜ್ ನಿರ್ದೇಶನದ ಕನ್ನಡಿಗ ಸಿನಿಮಾವನ್ನು ಸಹ ಸಿನಿಮೋತ್ಸವದಿಂದ ಹೊರಗೆ ಇಡಲಾಗಿದೆ.
ಅಂದ್ಹಾಗೆ ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಗಿರಿರಾಜ್ ಅವರು , ನಮ್ಮ ಚಿತ್ರ ಕನ್ನಡಿಗವನ್ನೂ ಕೂಡ biffes ಅವರ ಪ್ರದರ್ಶನ ಪಟ್ಟಿಯಿಂದ ಹೊರಗಿಟ್ಟಿದೆ. ಲಿಪಿಕಾರರ ಇತಿಹಾಸ, ಕನ್ನಡ ಕೃತಿಗಳ ಉಳಿವಿಗೆ ತ್ಯಾಗ ಮಾಡಿದವರ ಕಥನ ನೋಡಲು ಯೋಗ್ಯವಲ್ಲ ಅಂತ ನಿರ್ಧರಿಸಿದವರ ಹೊಟ್ಟೆ ತಣ್ಣಗಿರಲಿ. Zee 5 appಲ್ಲಿ ಕನ್ನಡಿಗ ಇದೆ. ಬಿಡುವು ಮಾಡಿಕೊಂಡು ನೋಡಿ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.