ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ…! ಮಾತು ಮೌನವಾಗಿದೆ. ಹೃಯದ ಮರಗುತ್ತಿದೆ. ಅಯ್ಯೋ ಈ ಸಾವು ನ್ಯಾಯವೇ… ಏ ಕ್ರೂರ ವಿಧಿಯೇ ನಿನಗೆ ಕರುಣೆ ಇಲ್ಲವೇ.. ಛೇ..! ಈ ಸುದ್ದಿ ಸುಳ್ಳಾಗಬೇಕು.. ಈ ಕೆಟ್ಟ ಘಳಿಗೆ ಬರಬಾರದಿತ್ತು. ಇದು ಕೋಟ್ಯಾಂತರ ಕನ್ನಡಿಗರ ಹೃದಯದ ಮಾತು.
ಹೌದು..! ಇಂದು ಕನ್ನಡಗರ ಹೃದಯ ಭಾರವಾಗಿದೆ. ಸಹಿಸಿಕೊಳ್ಳಲಾಗದ ನೋವನ್ನ ಕ್ರೂರ ವಿಧಿ ನಮಗೆಲ್ಲರಿಗೂ ಕೊಟ್ಟಿದೆ. ನಿಜ ಇವತ್ತು ಕನ್ನಡಿಗರ ಪಾಲಿಗೆ ಕರಾಳ ಶುಕ್ರವಾರ.
ಕನ್ನಡದ ರಾಜರತ್ನ, ರಾಜಕುಮಾರ, ಸರಳತೆಯ ಸಾಹುಕಾರ, ಪ್ರೀತಿಯ ಅಪ್ಪು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇದು ನಂಬಲೇಬೇಕಾದ ಕಟು ಸತ್ಯ. ಅರಗಿಸಿಕೊಳ್ಳಲೇಬೇಕಾದ ವಿಷಯ.
ಪುನೀತ್ ರಾಜ್ ಕುಮಾರ್..! ಕನ್ನಡ ಚಿತ್ರರಂಗದ ಅಜಾತ ಶತ್ರು. ವಿವಾದಗಳಿಲ್ಲದ ರಿಯಲ್ ಜಂಟಲ್ ಮೆನ್. ಆರು ವರ್ಷದಿಂದ ಅರವತ್ತು ವರ್ಷದವರೆಗೂ ಅಭಿಮಾನಿಗಳನ್ನ ಸಂಪಾದಿಸಿದ್ದ ನಟಸಾರ್ವಭೌಮ. ನಗು ನಗುತ್ತಲೇ ಎಲ್ಲರಲ್ಲೂ ಬೆರೆಯುತ್ತಿದ್ದ ಅಪ್ಪು, ಇದೀಗ ನಮ್ಮೆಲ್ಲರನ್ನೂ ಅನಾಥರನ್ನಾಗಿ ಮಾಡಿ ಬಾನ ಹಾದಿ ಹಿಡಿದಿದ್ದಾರೆ.
ಇಂದು ಬೆಳಿಗ್ಗೆ 11.30 ಸುಮಾರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.