ಬೆಂಗಳೂರು : ಅಪ್ಪು ನಿಧನದ ನೋವಿನಿಂದ ಇನ್ನೂ ಚಂದನವನ , ಸಿನಿಮಾ ತಾರೆಯರು , ಆಪ್ತರು , ಕುಟುಂಬಸ್ಥರು , ಅಭಿಮಾನಿಗಳು , ಇಡೀ ಕರ್ನಾಟಕ ಇನ್ನೂವರೆಗೂ ಹೊರಬಂದಿಲ್ಲ.. ಅವರನ್ನ ನೆಪುಇಸಿಕೊಳ್ತಾ ಈಗಲೂ ಭಾವಕರಾಗುತ್ತಾ ಪೋಸ್ಟ್ ಗಳನ್ನ ಹಾಕಲಾಗ್ತಿದೆ..
ಕನ್ನಡದ ‘ಯುವರತ್ನ’ ನಿಧನರಾಗಿ ಇಂದಿಗೆ ಸುಮಾರು 15 ದಿನಗಳು ಕಳೆದಿವೆ. ಇದೇ ನವೆಂಬರ್16ರಂದು ಕನ್ನಡ ಚಿತ್ರೋದ್ಯಮದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ್ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ರೂಪು-ರೇಷೆಗಳನ್ನು ಈಗಾಗಲೇ ಸಿದ್ಧಪಡಿಸಿದೆ.
ಇನ್ನೂ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದೆ.
ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ.
ದಕ್ಷಿಣ ಭಾರತದ ಚಿತ್ರರಂಗಕ್ಕೆ, ರಾಜಕೀಯದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಹೀಗಾಗಿ ನವೆಂಬರ್ 16ರಂದು ಇಡೀ ಕನ್ನಡ ಚಿತ್ರರಂಗ ಕೆಲಸ ಮಾಡುವುದಿಲ್ಲ. ಸಿನಿಮಾ ಚಿತ್ರೀಕರಣಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ ರಜೆ ನೀಡಲಾಗಿದೆ. ಆ ದಿನ ಯಾವ ಕೆಲಸವೂ ನಡೆಯುವುದಿಲ್ಲ.
ಚಿತ್ರರಂಗಕ್ಕೆ ಸಂಬಂಧಿಸಿದವರು ಎಲ್ಲರೂ ಕಾರ್ಯಕ್ರಮಕ್ಕೆ ಬರಲಿ ಅನ್ನುವ ಏಕೈಕ ಕಾರಣಕ್ಕೆ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇಡೀ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಪ್ಯಾಲೇಸ್ ಗ್ರೌಂಡ್ನಲ್ಲಿ ಜಮಾವಣೆಯಾಗಲಿದೆ.
ಪುನೀತ್ ನಮನ ಕಾರ್ಯಕ್ರಮಕ್ಕೆ ಅಣ್ಣಾವ್ರ ಇಡೀ ಕುಟುಂಬ ಭಾಗಿಯಾಗಲಿದೆ. ಪುನೀತ್ ರಾಜ್ ಕುಮಾರ್ ನಮನ ಸಲ್ಲಿಸಲು ಅಪ್ಪು ಕುಟುಂಬ, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕುಟುಂಬ ಸೇರಿದಂತೆ ಅಣ್ಣಾವ್ರ ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.