ಟಿ.ಎನ್ ಸೀತಾರಾಮ್, ಕನ್ನಡ ಕಿರುತೆರೆಯ ಬಾದ್ಷಾ. ಟಿವಿ ಲೋಕದಲ್ಲಿ ತಮ್ಮ ಸೂಕ್ಷ್ಮ
ಸಂವೇದನೆಯ ಕಥಾ ಹಂದರ, ಕೋರ್ಟ್ ರೂಂ ಡ್ರಾಮಾಗಳ ಮೂಲಕ ವೀಕ್ಷಕರ ಹೃದಯ
ಸಿಂಹಾಸನದಲ್ಲಿ ಆರೂಢರಾದವರು ಸೀತಾರಾಮ್. ೯೦ರ ದಶಕದಲ್ಲಿ ಟಿವಿ ಜಗತ್ತು
ಅನಾವರಣಗೊಳ್ಳುತ್ತಿದ್ದ ಹಾಗೆ ಅವರ ಮಾಯಾಮೃಗ ಧಾರಾವಾಹಿ ನೋಡುಗರ ಮನ ಸೆಳೆದಿತ್ತು.
ಆಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆ ಧಾರಾವಾಹಿ ನಂತರ ಜಿ ಕನ್ನಡ ವಾಹಿನಿಯಲ್ಲೂ
ಪ್ರಸಾರವಾಗಿತ್ತು. ಈಗ ಭೂಮಿಕ ಟಾಕಿಸ್ ಯೂ ಟ್ಯೂಬ್ ವಾಹಿನಿಯಲ್ಲಿಯೂ ಪ್ರತಿನಿತ್ಯ
ಪ್ರಸಾರವಾಗುತ್ತಿದ್ದು, ಲಕ್ಷಾಂತರ ನೋಡುಗರನ್ನು ನಾಸ್ಟಾಲ್ಜಿಕ್ ಭಾವ ಸಾಗರದಲ್ಲಿ
ಮುಳುಗಿಸುತ್ತಿದೆ. ಮಾಯಾಮೃಗದ ಯಶಸ್ಸಿನ ನಂತರ ಈಗ ಮತ್ತೆ ಟಿ ಎನ್ ಸೀತಾರಾಮ
ಮನೋರಂಜನಾ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಟಿವಿ ಧಾರಾವಾಹಿಗಳ
ಸಾಮ್ರಾಟನ ಕಣ್ಣು ಈಗ ವೆಬ್ ಸೀರಿಸ್ ಮೇಲೆ ಬಿದ್ದಿದೆ.
ಮಾಯಾಮೃಗಕ್ಕೂ ಮೊದಲು ಕಥೆಗಾರದ ಮೂಲಕ ತಮ್ಮೊಳಗಿನ ನಿರ್ದೇಶಕನನ್ನು
ಅನಾವರಣಗೊಳಿಸಿದ್ದ ಸೀತಾರಾಮ್ ಪಿ ಲಂಕೇಶ್ ಮತ್ತು ಪುಟ್ಟಣ್ಣ ಕಣಗಾಲರ ಗರಡಿಯಲ್ಲಿ
ಪಳಗಿದವರು. ಪುಟ್ಟಣ್ಣರ ಮಾನಸ ಸರೋವರದ ಸಂಭಾಷಣಾಕಾರರಾಗಿ ಕೆಲಸ ಮಾಡಿದ್ದವರು,
ಅದಕ್ಕೂ ಮೊದಲೇ ಆಸ್ಪೋಟದ ಮೂಲಕ ಭರವಸೆ ಮೂಡಿಸಿದ್ದವರು. ಅವರ ನಿರ್ದೇಶನದಲ್ಲಿ ಈ-
ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮನ್ವಂತರ, ಮುಕ್ತ, ಮುಕ್ತ-ಮುಕ್ತ, ಮಹಾಪರ್ವ ಮತ್ತು ನಂತರ
ಬದಲಾದ ಕಾಲಘಟ್ಟದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಗಳು
ದೇಶ ವಿದೇಶಗಳ ಕೋಟ್ಯಾಂತರ ಅಭಿಮಾನಿಗಳನ್ನು ಕುತೂಹಲವನ್ನು ಕೆರಳಿಸಿದ್ದ ಮಹಾನ್ ಕೃತಿಗಳು.
ಈಗ ಕೋವಿಡ್ ಸಂಕಷ್ಟದ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿರುವ ಸೀತಾರಾಮ್, ಮತ್ತೆ
ಮನ್ವಂತರ ಎನ್ನುವ ಹೊಸ ಪ್ರಾಜೆಕ್ಟ್ ಒಂದನ್ನು ಅನೌನ್ಸ್ ಮಾಡಿದ್ದಾರೆ.
ಈಗಾಗಲೇ ಈ ಧಾರಾವಾಹಿ ಚಿತ್ರೀಕರಣದ ಮಹೂರ್ತ ಸಹ ಆರಂಭವಾಗಿದ್ದು ಎಂದಿನಿಂದ
ಪ್ರಸಾರವಾಗುತ್ತದೆ ಅನ್ನುವ ನಿರೀಕ್ಷೆಯಲ್ಲಿ ಸೀರಿಯಲ್ ಪ್ರೇಮಿಗಳಿದ್ದಾರೆ. ಹಲವು ವರ್ಷಗಳ
ನಂತರದಲ್ಲಿ ಮಾಳವಿಕಾ ಅವಿನಾಶ್, ನಿರಂಜನ್ ದೇಶಪಾಂಡೆ, ಅಜಿತ್ ಹಂದೆ, ಮೇಧಾ
ವಿದ್ಯಾಭೂಷಣ್, ಚಂದನ್ ಶಂಕರ್, ಮೇಘಾ ನಾಡಿಗೇರ್, ಸುಂದರ್, ಪ್ರಶಾಂತ್ ಶೆಟ್ಟಿ, ರೂಪಾ
ಗುರುರಾಜ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ʻಮತ್ತೆ ಮನ್ವಂತರʼ
ಹಿಂದಿನ ಮನ್ವಂತರದ ಸೀಕ್ವಲ್ ಆಗಿದೆಯೇ? ಎನ್ನುವ ಪ್ರಶ್ನೆಯನ್ನು ಸಸ್ಪೆನ್ಸ್ನಲ್ಲಿ ಇಟ್ಟಿರುವ
ಸೀತಾರಾಮ್ ಇನ್ನೂ ಉತ್ತರ ಹೇಳಿಲ್ಲ. ಚಂದ್ರಹಾಸದ ಕವಿ ಎಚ್.ಎಸ್ ವೆಂಕಟೇಶ್
ಮೂರ್ತಿಯವರು ಮತ್ತೆ ಮನ್ವಂತರದ ಟೈಟಲ್ ಟ್ರಾಕ್ ರಚಿಸಿದ್ದರೇ, ಪ್ರವೀಣ್ ಡಿ. ರಾವ್ ರಾಗ
ಸಂಯೋಜನೆ ಮಾಡಿದ್ದಾರೆ ಹಾಗೂ ಕಂಚಿನ ಕಂಠದ ಸುಮಧುರ ಗಾಯಕ ವಿಜಯ್ ಪ್ರಕಾಶ್ ಹಾಡಿಗೆ
ಧ್ವನಿಯಾಗಿದ್ದಾರೆ. ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹಾಗೂ ಟಿಎನ್
ಸೀತಾರಾಮ್ ಸೇರಿ ಹಣೆದಿರುವ ಕಥೆಗೆ ಟಿಎನ್ ಸೀತಾರಾಮ್, ಅಶ್ವಿನಿ ಅನೀಶ್ ಹಾಗು ಸೌಮ್ಯಾ
ಸಾಲಿಮಠ್ ಸಂಭಾಷಣೆ ಬರೆದಿದ್ದಾರೆ.
ಈಗ ತಮ್ಮ ಭೂಮಿಕಾ ಟಾಕೀಸ್ ಯೂಟ್ಯೂಬ್ ವಾಹಿನಿಯಲ್ಲಿ ಮಾಯಾಮೃಗ ಸರಣಿಯ
ಕಂತುಗಳು ದಿನೇ ದಿನೇ ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುತೂಹಲಕಾರಿ
ಸಸ್ಪೆನ್ಸ್ ಥ್ರಿಲ್ಲರ್ ಕನ್ನಡದ ವೆಬ್ ಸೀರಿಸ್ ಒಂದನ್ನು ನಿರ್ಮಿಸಲು ಸೀತಾರಾಮ್
ಯೋಚಿಸಿದ್ದಾರೆ. ಸತ್ತವರಾರು? ಕೊಂದವರಾರು? ಸಿಎಸ್ಪಿ ಕ್ರಾಸ್ ಎಕ್ಸಾಮಿನಿಷನ್ನಲ್ಲಿ
ಬಹಿರಂಗವಾಗುವ ಸತ್ಯ ಯಾವುದು? ಬೆಂಗಳೂರಿನ ರುದ್ರಾಕ್ಷಿಪುರದ ಗಲ್ಲಿಯೊಂದರ ಮನೆಯೊಂದರಲ್ಲಿ
ಒಂದು ಮಧ್ಯರಾತ್ರಿ ಹಾರುವ ಗುಂಡು ಕೊಂದಿದ್ದು ಯಾರನ್ನು? ಹಂತಕರು ಯಾರು? ಕೋರ್ಟ್
ರೂಂ ಡ್ರಾಮಾದಲ್ಲಿ ʻಮಾಯಾ ಮರ್ಡರ್ ಕೇಸ್' ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವ
ಕುತೂಹಲಗಳ ಮಿಶ್ರಿತ ಟ್ರೇಲರ್ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಮತಧಾನ, ಮೀರಾ ಮಾಧವ
ರಾಘವ, ಕಾಫಿ ತೋಟ ಎಂಬ ಸಿನಿಮಾಗಳನ್ನೂ ನಿರ್ದೇಶಿಸಿರುವ ಸೀತಾರಾಮ್ ಜಗದ್ವಿಖ್ಯಾತರಾಗಿದ್ದು
ಮಾತ್ರ ಕನ್ನಡ ಕಿರುತೆರೆಯ ಸೀರಿಯಲ್ ಅಂಗಳದ ಮನೆಮನೆ ಕಥೆಯ ಮ್ಯಾಜಿಕ್ ಮೂಲಕ. ಈಗ
ಮತ್ತೆ ಮನ್ವಂತರ ಮತ್ತು ಮಾಯಾ ಮರ್ಡರ್ ಕೇಸ್ ಕಥೆಗಳಲ್ಲಿ ಅದೇ ಮಾಂತ್ರಿಕಥೆ ನೋಡಬಹುದೇ
ಕಾದು ನೋಡೋಣ. ಭೂಮಿಕಾ ತಂಡಕ್ಕೆ ನಮ್ಮ ಪತ್ರಿಕೆಯ ಕಡೆಯಿಂದಲೂ ಒಂದು ಆಲ್ ದಿ ಬೆಸ್ಟ್
ಹೇಳೋಣ..
-ರೂಪಾ ಮಾಲತೇಶ್, ಸುದ್ದಿ ಸಂಪಾದಕಿ