ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ʻಪುಷ್ಪʼ ಚಿತ್ರದ 4ನೇ ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಇಂದು ರಿಲೀಸ್ ಆಗಿದೆ. ʻಏ ಮಗಾ ಇದು ನನ್ನ ಜಾಗʼ ಎಂಬ ಈ ಹಾಡನ್ನು ಕನ್ನಡದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ವಿಭಿನ್ನವಾಗಿ ಮೂಡಿಬಂದಿದೆ. ಪುಷ್ಪ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ರ ಲುಕ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಹಾಡಿನಲ್ಲಿ ನಾಯಕ ಪುಷ್ಪರಾಜ್ ” ಏ ಮಗಾ ಇದು ನನ್ನ ಜಾಗ ” ಎಂದು ಹೇಳುತ್ತಾ ತೋಳುಗಳನ್ನು ತಟ್ಟುತ್ತಾ ಜಂಗಿ ಕುಸ್ತಿಗೆ ಆಹ್ವಾಸುವ ಪೈಲ್ವಾನನಂತೆ ಅಬ್ಬರಿಸಿದ್ದಾನೆ.
ಆ ಪಕ್ಕ, ಈ ಪಕ್ಕ, ಆಕಾಶದ ತಾರೆ ಚುಕ್ಕೆಗಳೆಲ್ಲ ನಂದೆ ಎಂದು ಕುಣಿಯುತ್ತ ಪುಷ್ಪನ ಪ್ರಪಂಚಕ್ಕೆ ತಾನೇ ದೊರೆ ಎಂದು ಪುಷ್ಪರಾಜ್ ಘೋಷಿಸಿರುವ ಹಾಗಿದೆ ಈ ಹಾಡು. ಪುಷ್ಪ ಚಿತ್ರದ ಮೊದಲ ಹಾಡು “ಜೋಕೆ ಜೋಕೆ”, ಎರಡನೇ ಹಾಡು ಶ್ರೀವಲ್ಲಿ ಹಾಗೂ ಮೂರನೇ ಹಾಡು ಸಾಮಿ ಸಾಮಿ ಪಂಚ ಭಾಷೆಗಳಲ್ಲಿ ಈಗಾಗಲೇ 250 ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ. ಅದೇ ರೀತಿ ಈ ಹಾಡು ಸಹ ಧೂಳೆಬ್ಬಿಸುವ ನಿರೀಕ್ಷೆಯಿದೆ. ಮೈತ್ರಿ ಮೂವಿ ಮೇಕಸ್೯ ನಿರ್ಮಾಣದ, ಸುಕುಮಾರ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆ ಫಹಾದ್ ಫಾಸಿಲ್, ಡಾಲಿ ಧನಂಜಯ, ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇದೇ ಡಿಸೆಂಬರ್ 17 ರಂದು ಚಿತ್ರ ತೆರೆಕಾಣಲಿದೆ.