ಪ್ರಸ್ತುತ ಗಣೇಶ್ ನಟನೆಯ ಗಾಳಿಪಟ 2 ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ..
ಗಾಳಿಪಟ–2 ಚಿತ್ರದ ನಂತರ, ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶದಲ್ಲಿ ಮೂಡಿಬರಲಿರುವ ಮುಂದಿನ ಚಿತ್ರಕ್ಕೆ ‘ಗರಡಿ’ ಎಂದು ಹೆಸರಿಡಲಾಗಿದೆ.
ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ರಾಜ್ಯ ಕೃಷಿ ಸಚಿವರಾದ ಬಿ. ಸಿ ಪಾಟೀಲ್ ರವರ ಪತ್ನಿ ವನಜಾ ಬಿ ಪಾಟೀಲ್ ಹಾಗು ಪುತ್ರಿ ಸೃಷ್ಟಿ ಪಾಟೀಲ್ ಬಂಡವಾಳ ಹೂಡಲಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಯುವ ನಟ ಯಶಸ್ ಸೂರ್ಯ ನಟಿಸುತ್ತಿದ್ಡು, ಕೌರವ ಬಿ.ಸಿ ಪಾಟೀಲ್ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ.
ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದ್ಡು, ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯೊಬ್ಬರು ಆಯ್ಕೆಯಾಗಬುಹುದೆಂಬ ಸೂಚನೆ ಸಿಕ್ಕಿದೆ.
ಇನ್ನುಳಿದಂತೆ ಚಿತ್ರದ ಬೇರೆ ಬೇರೆ ಪ್ರಮುಖ ಪಾತ್ರಗಳಿಗಾಗಿ ಕಲಾವಿದರ ಹುಡುಕಾಟ ಜಾರಿಯಲ್ಲಿದೆಯೆಂದು ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗು ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ.
ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಭಟ್ಟರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದು, ಭಟ್ಟರ ಜೊತೆಗೂಡಿ “ಡ್ರಾಮಾ” ಚಿತ್ರದ ಚಿತ್ರಕಥೆ ರಚಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ಭಟ್ಟರೊಡನೆ ಮತ್ತೊಮ್ಮೆ ಕೈಜೋಡಿಸಿದ್ದಾರೆ.
ಚಿತ್ರದ ‘ಮುಹೂರ್ತ’ ಹಾಗು ‘ಟೈಟಲ್ ಲಾಂಚ್’ ಕಾರ್ಯಕ್ರಮಗಳು ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ಇತ್ತೀಚೆಗಷ್ಟೇ ಜರುಗಿದ್ದು, ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ನೆರೆದು ಚಿತ್ರತಂಡವನ್ನು ಅಶೀರ್ವದಿಸಿದ್ದು ಇಡೀ ಚಿತ್ರತಂಡಕ್ಕೆ ಸಂತಸವನ್ನುಂಟು ಮಾಡಿದೆ.