ಗುರುರಾಜ್ ಕುಲಕರ್ಣಿ ನಿರ್ಮಿಸಿ, ನಿರ್ದಶಿಸಿರುವ “ಅಮೃತ್ ಅಪಾರ್ಟ್ ಮೆಂಟ್ಸ್” ಚಿತ್ರ ಇದೇ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.
ಬಿಡುಗಡೆ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.
ನಾನು ಈ ಹಿಂದೆ ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದೇನೆ. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇದೇ ಇಪ್ಪತ್ತಾರರಂದು ಚಿತ್ರ ಬಿಡುಗಡೆಯಾಗಲಿದೆ.
ಇದು ನಗರದ ಜೀವನ ಕಥೆ. “ಅಮೃತ್ ಅಪಾರ್ಟ್ ಮೆಂಟ್ಸ್” ಅಂದರೆ ಹಕ್ಕಿಗೆ ತಕ್ಕಂತ ಗೂಡು ಎನ್ನಬಹುದು.
ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ಮಾತುಗಳಾಡಿದ್ದಾರೆ.
ವಿಶೇಷವಾಗಿ ಹೆಣ್ಣು ಮಕ್ಕಳು ಮನಮುಟ್ಟುವಂತ ಅಭಿಪ್ರಾಯ ನೀಡಿದ್ದಾರೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಹರಸಿ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಗುರುರಾಜ್ ಕುಲಕರ್ಣಿ.
ಇದು ನಗರದಲ್ಲಿ ವಾಸಿಸುವ ದಂಪತಿಗಳ ಕಥೆ. ನಿರ್ದೇಶಕರು ಕಥೆ ಹೆಣೆದಿರುವ ರೀತಿ ಬಹಳ ಚೆನ್ನಾಗಿದೆ. ಎಲ್ಲರ ಅಭಿನಯವು ಸೊಗಸಾಗಿದೆ ಎಂದರು ನಟ ಬಾಲಾಜಿ ಮನೋಹರ್.
ಇ ಎಂ ಐ ಮೂಲಕ ಮನೆಕೊಳ್ಳುವ ಮಧ್ಯಮವರ್ಗದ ದಂಪತಿಗಳ ಜೀವನದ ಕಥೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕ ತಾರಕ್ ಪೊನ್ನಪ್ಪ.
ಬಹಳ ದಿನಗಳಿಂದ ನನಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿತ್ತು. ಆ ಆಸೆಯನ್ನು ನಿರ್ದೇಶಕ ಗುರುರಾಜ್ ಕುಲಕರ್ಣಿ ಪೂರ್ಣಗೊಳಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು ನಟಿ ಮಾನಸ ಜೋಷಿ.
ಚಿತ್ರದಲ್ಲಿ ಅಭಿನಯಿಸಿರುವ ಸೀತಾಕೋಟೆ, ಮಹಂತೇಶ್, ರಾಜ್ ಮುಂತಾದ ಕಲಾವಿದರು, ಸಂಕಲನಕಾರ ಬಿ.ಎಸ್.ಕೆಂಪರಾಜ್ ಹಾಗೂ ಮುಂತಾದ ತಂತ್ರಜ್ಞರು ಈ ಸಿನಿಮಾ ಕುರಿತು ಮಾತಾನಾಡಿದರು.
ಮುನ್ನೂರು ಸಿನಿಮಾಗಳಿಗೆ ಸಂಕಲನ ಕಾರ್ಯ ಪೂರೈಸಿದ ಹಿನ್ನೆಲೆಯಲ್ಲಿ ಸಂಕಲನಕಾರ ಕೆಂಪರಾಜ್ ಅವರಿಗೆ ಚಿತ್ರತಂಡ ಆತ್ಮೀಯ ಸನ್ಮಾನ ಮಾಡಿ ಸತ್ಕರಿಸಿದರು.