ಕೊರೊನಾ ಸಂಕಷ್ಟದ ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡಿದ್ದ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ರಿಯಲ್ ಹೀರೋ ಅಂತಲೇ ಕರೆಸಿಕೊಳ್ಳುತ್ತಿರುವ ಸೋನು ಸೂದ್ ಕಷ್ಟದಲ್ಲಿರುವವರಿಗೆ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತಾರೆ.
ಕಳೆದ ಕೊರೊನಾ ಸಮಯದಿಂದಲೂ ಸೋಶಿಯಲ್ ಮೀಡಯಾದಲ್ಲಿ ಆಕ್ಟಿವ್ ಆಗಿರುವ ಸೋನು ಸೂದ್, ಸಾಕಷ್ಟು ಮಂದಿ ತಮ್ಮ ಅಣ್ಣ, ತಂಗಿ, ಅಪ್ಪ ಹೀಗೆ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿ ಸೋನು ಸೂದ್ ಕಡೆಯಿಂದ ಹಣ ಸಹಾಯ ಪಡೆಯುತ್ತಿದ್ದಾರೆ. ಅದರಂತೆ ಸೋನು ಸೂದ್ ಟ್ವಿಟ್ಟರ್‍ನಲ್ಲಿ ಆಂಧ್ರಪ್ರದೇಶದ ವ್ಯಕ್ತಿಯೋರ್ವ “ಸೋನು ಸೂದ್ ಅವರೇ, ತಿರುಪತಿಯಲ್ಲಿ ಅತಿವೃಷ್ಠಿಯಿಂದ ತೀವ್ರವಾಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮ್ಮ ಮನೆಗಳಿಗೆ ನೀರು ನುಗ್ಗಿ ತುಂಬಾ ಸಮಸ್ಯೆಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಜನ ಬೀದಿಪಾಲಾಗುತ್ತಿದ್ದಾರೆ. ತಿನ್ನೋದಕ್ಕೆ ಆಹಾರ ಕೂಡ ಸಿಗುತ್ತಿಲ್ಲ, ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ” ಎಂದು ಮನವಿ ಮಾಡಿಕೊಂಡಿದ್ದಾನೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ತಮ್ಮ ಕೈಯಲ್ಲಾದಷ್ಟು ಮನೆಗಳನ್ನು ಕಟ್ಟಿಸಿಕೊಡುವುದಾಗಿ ಭರಸವೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೋನು ಸೂದು ಸಾಕಷ್ಟು ಮಂದಿಗೆ ನೆರವಾಗಿದ್ದರು. ತಮ್ಮ ಟ್ರಸ್ಟ್ ಮೂಲಕ ದೇಶದ ಮೂಲೆ ಮೂಲೆಗೆ ಆಕ್ಸಿಜನ್ ಸಪ್ಲೈ ಮಾಡಿಸಿದ್ದರು. ಇದೀಗ ನೆರೆ ಸಂತ್ರಸ್ತದ ಸಂಕಷ್ಟಕ್ಕೆ ಸ್ಪಂದಿಸಿರೋದಕ್ಕೆ ಮತ್ತೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂದಹಾಗೆ ಕಳೆದ ಕೆಲ ದಿನಗಳಿಂದ ಆಂಧ್ರಪ್ರದೇಶದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ವರುಣನ ಆರ್ಭಟಕ್ಕೆ ಚಿತ್ರಾವತಿ ನದಿ ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ಇದರಿಂದ ಹಳ್ಳಿಗಳಿಗೆ ನೀರು ನುಗ್ಗಿದ್ದು, ಹೆಲಿಕಾಪ್ಟರ್ ಮೂಲಕ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. ತಿರುಪತಿಯಲ್ಲಿ ಜಲಪ್ರಲಯವಾದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ಸಂಕಷ್ಟಕ್ಕೆ ಸಿಲುಕಿದ್ದಾರೆ.