ಅಂಬರೀಶ್ ಪುಣ್ಯಸ್ಮರಣೆ ನಮನ ಸಲ್ಲಿಸಿದ ಚಿತ್ರರಂಗದ ಗಣ್ಯರು
ಮಂಡ್ಯದ ಗಂಡು ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ದೈಹಿಕವಾಗಿ ನಮ್ಮನೆಲ್ಲ ಅಗಲಿ ಇಂದಿಗೆ ಮೂರು ವರ್ಷ. ಅಂಬಿ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಗಣ್ಯಾತಿಗಣ್ಯರು ಅಂಬಿಯನ್ನ ನೆನೆದು ಸ್ಮರಣೆ ಮಾಡಿದರು. ಕಂಠೀರವ ಸ್ಟೂಡಿಯೋದಲ್ಲಿರುವ ಅವರ ಸಮಾಧಿಗೆ ಪತ್ನಿ ಸುಮಲತ ಅಂಬರೀಷ್, ಪುತ್ರ ಅಭಿಷೇಕ್ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ಅಂಬಿ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ ನಮಿಸಿದರು. ಸಚಿವ ಕೆ ಗೋಪಾಲಯ್ಯ ರಾಕ್ ಲೈನ್ ವೆಂಕಟೇಶ್ ನಟ ದೊಡ್ಡಣ್ಣ ಸೇರದಂತೆ ಚಿತ್ರರಂಗದ ಗಣ್ಯರು ಆಗಮಿಸಿ ಪುಷ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಂಬರೀಶ್ ಅವರಿಗೂ ಸಹ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತ ಅಂಬರೀಶ್ “ ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದ್ರೆ ಅದು ಅಂಬರೀಷ್ ಗೂ ಸಿಕ್ಕಂತೆ. ಅಂಬರೀಷ್ ಅವರಿಗೂ ಅವರಿಗೆ ಸಿಗಬೇಕಾದ ಗೌರವ ಸಿಕ್ಕೆ ಸಿಗುತ್ತೆ ಎಂಬ ನಂಬಿಕೆ ಇದೆ. ಜನರ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಬೇಕಿಲ್ಲ ಅದು ಅಂಬರೀಶ್ ಗೆ ಸಿಕ್ಕಿದೆ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್ಗೂ ಸಿಕ್ಕಿದಂತೆ . ಅದರಲ್ಲಿ ಯಾವುದೇ ಭೇದಭಾವ ಇಲ್ಲ. ಒಂದು ವೇಳೆ ಅಂಬರೀಶ್ ಈಗ ಇದ್ದಿದ್ರೆ ಅವ್ರಿಗೆ ಸಿಗೋದ್ಕಿಂತ ‘ಅಪ್ಪು’ಗೆ ಪ್ರಶಸ್ತಿ ಕೊಟ್ಟಿರೋದಕ್ಕೆ ಅವರು ಹೆಮ್ಮೆ ಪಡ್ತಿದ್ರು, ಸಂತೋಷ ಪಡ್ತಿದ್ರು” ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೆ ಗೋಪಾಲಯ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅಂಬಿ ಸ್ಮಾರಕಕ್ಕೆ 4 ಕೋಟಿ 75 ಲಕ್ಷ ನೀಡಿದ್ದರು. ಅದರ ಕೆಲಸಗಳು ಸದ್ಯದಲ್ಲೆ ಶುರುವಾಗಲಿದೆ ಎಂದು ತಿಳಿಸಿದರು.