ಚಾಮರಾಜನಗರ : ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ನಿರ್ದೇಶನ ಹಾಗೂ ನಟಿಸಿರುವ ಗರುಡ ಗಮನ, ವೃಷಭ ವಾಹನ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಿದೆ.. ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ..
ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳನ್ನ ನಿಭಾಯಿಸಿದ್ದಾರೆ.. ಈ ಸಿನಿಮಾದಲ್ಲಿ ಶಿವನ ಪಾತ್ರಧಾರಿಯಾಗಿ ರಾಜ್ ಬಿ ಶೆಟ್ಟಿ ಮಳೆಯಲ್ಲಿ ಕೊಲೆ ಮಾಡಿ ಹುಲಿ ನೃತ್ಯ ಮಾಡಿದ್ದು, ಈ ದೃಶ್ಯ ಥಿಯೇಟರ್ ನಲ್ದಲಿ ನೋಡ್ತಿದ್ರೆ ಒಂದು ಕ್ಷಣ ಮೈ ಝುಂ ಎನ್ನುತ್ತೆ.. ನಿಜ ಹೇಳೋದಾದ್ರೆ ಈ ದೃಶ್ಯವೇ ಸಿನಿಮಾದಲ್ಲಿ ಹೈಲೇಟ್..
ಹುಲಿ ನೃತ್ಯ ಮಾಡುವ ದೃಶ್ಯದ ಹಿನ್ನಲೆಯಲ್ಲಿ ಸೂಜುಗಾದ ಸೂಜಿ ಮಲ್ಲಿಗೆ ಎಂಬ ಮಲೆ ಮಹದೇಶ್ವರಸ್ವಾಮಿಯ ಜಾನಪದ ಹಾಡನ್ನು ಬಳಸಿಕೊಳ್ಳಲಾಗಿದೆ.. ಇದಕ್ಕೆ ಇದೀಗ ಆಕ್ಷೇಪ ವ್ಯಕ್ತವಾಗಿದೆ.
ಹೌದು ಮಹದೇಶ್ವರ ಬೆಟ್ಟದ ವ್ಯಾಪ್ತಿಯವರಾದ ಯುವ ಸಾಹಿತಿ ಸ್ವಾಮಿ ಪೊನ್ನಾಚಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಗರುಡ ಗಮನ, ವೃಷಭ ವಾಹನ ಚಿತ್ರ ಯಶಸ್ವಿಯಾಗಲಿ. ಆದರೆ, ಕೊಲೆ ಮಾಡಿ ಕುಣಿಯೋ ದೃಶ್ಯವೊಂದರಲ್ಲಿ ಆ ದೃಶ್ಯಕ್ಕೆ ಸಂಬಂಧವೇ ಇರದ, ಅಸಹಜವಾಗಿ ಮಹದೇಶ್ವರನ ಹಾಡು ಸೂಜುಗಾದ ಸೂಜಿ ಮಲ್ಲಿಗೆಯನ್ನು ಬಳಸಿಕೊಳ್ಳಲಾಗಿದೆ.
ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೇ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ. ಜಾನಪದ ಅಂದ ತಕ್ಷಣ ಏನಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯು ಇರಲಿಲ್ಲವೇ? ಮಾರ್ಕೆಟ್ ಬೇರೆ ರೀತಿಯಲ್ಲೇ ಮಾಡಿಕೊಳ್ಳಬಹುದು. ಹೀಗಲ್ಲ. ಚಿತ್ರ ತಂಡ ಗಮನಿಸಬೇಕು ಎಂದು ಬರೆದಿದ್ದಾರೆ.
ಇದೇ ರೀತಿ ಇನ್ನೂ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರ ಪೋಸ್ಟ್ ಗಳಿಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಗಳನ್ನ ಮಾಡ್ತಾ ತಮ್ಮ ವಿಚಾರಗಳನ್ನ ಮುಂದಿಡ್ತಿದ್ದಾರೆ..