ಬೆಂಗಳೂರು : ಸ್ಯಾಂಡಲ್ ವುಡ್ ನ ‘ಯುವರತ್ನ’ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ 1 ತಿಂಗಳೇ ಕಳೆದಿದೆ.. ಆದ್ರೂ ಆ ನೋವು ಇನ್ನೂ ಮಾಸಿಲ್ಲ.. ಆ ಕಹಿ ಸತ್ಯ ಅರಿಗಿಸಿ ಕೊಳ್ಳೋದಕ್ಕೆ ಕುಟುಂಬ ಹಾಗೂ ಕರ್ನಾಟಕದ ಜನರಿಂದ ಸಾಧ್ಯವಾಗ್ತಿಲ್ಲ..
ಈ ನಡುವೆ ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರನ್ನ ಭೇಟಿಯಾಗಿದ್ದ ಆದಿಚುಂಚನಗಿರಿ ಶ್ರೀಗಳು ಅವರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಕನ್ನಡ ಕಲಾ ಕ್ಷೇತ್ರಕ್ಕೆ ಪುನೀತ್ ರಾಜ್ಕುಮಾರ್ ಅವರು ನೀಡಿದ ಕೊಡುಗೆ ಅಪಾರ. ಮೊದೊಲಿನಿಂದಲೂ ರಾಜ್ಕುಮಾರ್ ಕುಟುಂಬಕ್ಕೆ ಮತ್ತು ಮಠಕ್ಕೆ ಅವಿನಾಭಾವ ಸಂಬಂಧ ಇದೆ ಎಂದರು.
ರಾಜ್ಕುಮಾರ್ ಕುಟುಂಬದ ಕುಡಿ ಪುನೀತ್ ಅವರು ಚಿಕ್ಕ ವಯಸ್ಸಿನಿಂದ ಕಲೆಗೆ ಜೀವನ ಮುಡುಪಾಗಿಟ್ಟಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಕುಟುಂಬ ಕಂಗೆಟ್ಟಿದೆ. ಅವರ ಅಗಲಿಕೆಯ ನೋವು ಭರಿಸಲು ಕಷ್ಟ. ಆದರೂ ಪ್ರತಿ ಕಷ್ಟದಲ್ಲೂ ಅಪ್ಪು ಕುಟುಂಬದ ಜೊತೆ ಮಠ ಇರುತ್ತದೆ ಎಂದು ತಿಳಿಸಿದರು.
ಅಪ್ಪು ಕುಟುಂಬಕ್ಕೆ ಮತ್ತು ಕನ್ನಡ ನಾಡಿಗೆ ಅಪ್ಪು ಅಗಲಿಕೆ ಭರಿಸುವ ಶಕ್ತಿ ದೇವರು ನೀಡಲಿ ಅಂತ ಕೇಳಿಕೊಳ್ತೀವಿ ಎಂದು ಹೇಳಿದ ಅವರು ಕುಟುಂಬಕ್ಕೆ ಆಶೀರ್ವಾದ ನೀಡಿದರು.
ಶ್ರೀಗಳಿಗೆ ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದ್ದರು. ಈ ವೇಳೆ ಮಾತನಾಡಿದ ಸಚಿವ ಸುಧಾಕರ್ ಶ್ರೀಗಳು, ಇಂದು ಪುನೀತ್ ನಿವಾಸಕ್ಕೆ ಭೇಟಿ ಆಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಪುನೀತ್ ನಿಧನರಾಗಿ ಒಂದು ತಿಂಗಳು ಕಳೆದಿದೆ. ನೈತಿಕ ಸ್ಫೂರ್ತಿ ಮತ್ತು ವಿಶೇಷ ಆಶೀರ್ವಾದ ನೀಡಲು ಇಂದು ಶ್ರೀಗಳು ಬಂದಿದ್ದಾರೆ ಎಂದು ಹೇಳಿದರು.
ಅಶ್ವಿನಿ ಅವರಿಗೆ ವಿಶೇಷ ಆಶೀರ್ವಾದ ನೀಡಿದ್ದಾರೆ. ಶೀಘ್ರದಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿ ಅಂತ ಶ್ರೀಗಳು ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ಶ್ರೀಗಳು ಬಂದಿರೋದು ಅವರ ಕುಟುಂಬಕ್ಕೆ ಸಮಾಧಾನ ತಂದಿದೆ. ಪುನೀತ್ ಕುಟುಂಬದ ಜೊತೆ ಮಠ, ಸ್ವಾಮೀಜಿಗಳು, ಲಕ್ಷಾಂತರ ಭಕ್ತರು ಸದಾ ಇರುತ್ತಾರೆ ಎಂದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಕೂಡ ಹಾಜರಿದ್ದರು.