ಪಂಚಭೂತಗಳಲ್ಲಿ ಲೀನರಾದ ನಟ ಶಿವರಾಂ
ಬೆಂಗಳೂರು : ನಿನ್ನೆ ನಿಧನರಾದ ಚಂದನವನದ ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿತು. ಗುರುಸ್ವಾಮಿಯಾಗಿದ್ದ ಶಿವರಾಂಗೆ ಪಂಚಾಮೃತ ಅಭಿಷೇಕ ಮತ್ತು ಕೇಸರಿ ವಸ್ತ್ರ ಸಮರ್ಪಿಸಿ ಚಿತಾಗಾರಾದಲ್ಲಿ ಬ್ರಾಹ್ಮಣ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಲಾಯಿತು.
ಈ ವೇಳೆ ಅಯ್ಯಪ್ಪ ಭಕ್ತರು ಭಜನೆ ಮಾಡಿದರು. ಶಿವರಾಂ ಪುತ್ರರಾದ ಹಿರಿಯ ಮಗ ರವಿಶಂಕರ್ ಮತ್ತು ಲಕ್ಷ್ಮೀಶ್ ಅಗ್ನಿ ಸ್ಪರ್ಶ ಮಾಡಿದರು. ಈ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಶಿವರಾಂ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಚಿತ್ರರಂಗದ ಹಲವು ಮಂದಿ ಹಿರಿಯ ನಟನ ದರ್ಶನ ಪಡೆದು ಕಂಬನಿ ಮಿಡಿದರು.
ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದ ಶಿವರಾಂ ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದರು. ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರಿಗೆ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆ ಬಳಿಕ ಅವರು ಕೋಮಾದಲ್ಲಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದರು.