ಕೋರ್ಟ್ ಅಂಗಳ ತಲುಪಿದ ‘ಗರುಡ ಗಮನ ವೃಷಭ ವಾಹನ’ ವಿವಾದ
ಚಾಮರಾಜನಗರ: ಚಿತ್ರಮಂದಿರಗಳಲ್ಲಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿರುವ ರಾಜ್ ಬಿ ಶೆಟ್ಟಿ ನಿರ್ದೇಶನ , ನಟನೆಯ ಸಿನಿಮಾ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಈಗ ಕೋರ್ಟ್ ಮೆಟ್ಟಿಲೇರಿದೆ..
ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕ್ರೌರ್ಯ ಮೆರೆಯುವ ದೃಶ್ಯವಿದ್ದು, ಅದಕ್ಕೆ ಮಹದೇಶ್ವರನ ಜನಪದ ಹಾಡು ‘ಸೋಜುಗಾದ ಸೂಜುಮಲ್ಲಿಗೆ’ ಬಳಕೆ ಮಾಡಲಾಗಿದ್ದು ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರು.
ಅಲ್ಲದೇ ಚಿತ್ರದ ವಿರುದ್ಧ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದರು.
ವಿಜಯ್‍ಕುಮಾರ್ ಅವರ ಈ ಅರ್ಜಿಯಲ್ಲಿ, ಚಿತ್ರದಲ್ಲಿ ಮಹದೇಶ್ವರನ ಹಾಡು ತೆಗೆಯಬೇಕು ಇಲ್ಲವೇ, ಮ್ಯೂಟ್ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಅವರು ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ.ಬಿ.ವಿ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿ ಗೀತೆಯನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ.
ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ. ಪರಿಣಾಮ ಇಂದು ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಲಿದೆ. ಈ ಹಿನ್ನೆಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮಾದಪ್ಪನ ಭಕ್ತರು ಸಹ ‘ಗರುಡ ಗಮನ ವೃಷಭ ವಾಹನ’ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.