ರಿಯಲ್ ಹೀರೋ ಸೋನು ಸೂದ್ ಗೆ ಮತ್ತೊಂದು ನೋಟಿಸ್ ಜಾರಿ..!
ಮುಂಬೈ : ಸುಮಾರು 2 ವರೆ ವರ್ಷಗಳಿಂದ ಅಂದ್ರೆ ಕೊರೊನಾ ಸೋಂಕಿನ ಆತಂಕ ದೇಶದಲ್ಲಿ ಎದುರಾಗಿದಾಗಿನಿಂದಲೂ ಬಹುಭಾಷಾ ನಟ ಸೋನು ಸೂದ್ ಜನರಿಗೆ ಸಾಕಷ್ಟು ಸಹಾಯಗಳನ್ನ ಮಾಡುತ್ತಾ ಬಂದಿದ್ದಾರೆ.. ಈಗಲೂ ಅಗತ್ಯವಿರುವವರಿಗೆ ಸಹಾಯ ಮಾಡೋದ್ರಲ್ಲಿ ಸೋನು ಹಿಂದೇಟು ಹಾಕಿಲ್ಲ.. ಸಹಾಯದ ಪರ್ವ ಮುಂದುವರೆಸಿಕೊಂಡೇ ಹೋಗುತ್ತಿರುವ ಸೋನು ರೀಲ್ ನಲ್ಲಿ ವಿಲ್ಲನ್ ಆದ್ರೂ ರಿಯಲ್ ಲೈಫ್ ನ ಹೀರೋ ಆಗಿದ್ದಾರೆ..
ಆದ್ರ ಪರರ ಸಹಾಯದಲ್ಲೇ ಸಂತೃಪ್ತಿ ಕಾಣುತ್ತಿರುವ ರಿಯಲ್ ಹೀರೋಗೆ ಇದೀಗ ಒಂದು ಸಂಕಷ್ಟ ಎದುರಾಗಿದೆ.. ಸೋನು ಸೂದ್ ಅವರಿಗೆ ಸೇರಿದ ಮುಂಬೈನ ಆಸ್ತಿಯೊಂದರ ವಿಚಾರವಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆಯೂ ಇದೇ ವಿಚಾರವಾಗಿ ಸೋನು ಸೂದ್‌ಗೆ ನೊಟೀಸ್ ನೀಡಲಾಗಿತ್ತು.
ಸೋನು ಸೂದ್ ಅವರು ಮುಂಬೈನಲ್ಲಿ ಹೋಟೆಲ್ ಒಂದನ್ನು ನಿರ್ಮಾಣ ಮಾಡಿದ್ದು, ಈ ಹೋಟೆಲ್ ನಿಯಮಗಳಿಗೆ ಅನುಗುಣವಾಗಿಲ್ಲವೆಂದು ಎಂದು ಮುಂಬೈ ಮಹಾನಗರ ಪಾಲಿಕೆ ನೊಟೀಸ್ ಜಾರಿ ಮಾಡಿತ್ತು. ಹೋಟೆಲ್‌ನ ಒಂದು ಭಾಗವನ್ನು ಒಡೆದು ಅದನ್ನು ಬದಲಾಯಿಸುವಂತೆ ತಿಳಿಸಲಾಗಿತ್ತು. ಅದರ ವಿರುದ್ಧ ಸೋನು ಸೂದ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮತ್ತೆ ಬಿಎಂಸಿಯು ನೊಟೀಸ್ ಜಾರಿ ಮಾಡಿದೆ.
ಜುಹುನಲ್ಲಿರುವ ಹೋಟೆಲ್ ಅನ್ನು ವಾಸಿಸುವ ಮನೆಯನ್ನಾಗಿ, ಪರಿವರ್ತಿಸಿಕೊಳ್ಳಬೇಕೆಂದು ಬಿಎಂಸಿ ನೀಡಿರುವ ಹೊಸ ನೊಟೀಸ್‌ನಲ್ಲಿ ಸೂಚಿಸಿದೆ. ಸೋನು ಸೂದ್ ಸ್ವತಃ ತಮ್ಮ ಹೋಟೆಲ್ ಕಟ್ಟಡವನ್ನು ವಾಸಸ್ಥಳವಾಗಿ ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಕಳೆದ ವರ್ಷ ಕೋರ್ಟ್‌ನಲ್ಲಿ ಹೇಳಿದ್ದರು. ಆದರೆ ಈ ವರೆಗೆ ಅದನ್ನು ಬದಲಾವಣೆ ಮಾಡಿಲ್ಲ. ಹೀಗಾಗಿ ಹೊಸ ನೊಟೀಸ್ ನೀಡಲಾಗಿದೆ.
ನಿಮ್ಮ 6 ಮಹಡಿಯ ಕಟ್ಟಡದ ಮೊದಲ ಮಹಡಿಯನ್ನು ವಾಸ ಸ್ಥಳವಾಗಿ ಬದಲಾಯಿಸುತ್ತೇವೆ ಎಂದೂ, ಲಾಡ್ಜಿಂಗ್ ಸೇವೆ ಬಂದ್ ಮಾಡುತ್ತೇವೆ ಎಂದು ನೀವು ಪತ್ರದಲ್ಲಿ ಹೇಳಿದ್ದಿರಿ. ಹಾಗೂ ಕಟ್ಟಡದಲ್ಲಿ ನಿಯಮದ ಪ್ರಕಾರ ಮಾಡಬೇಕಿದ್ದ ಬದಲಾವಣೆ ಕಾಮಗಾರಿಯನ್ನು ಪ್ರಾರಂಭ ಮಾಡುವುದಾಗಿ ಹೇಳಿದ್ದಿರಿ. ನಾವು ಅಕ್ಟೋಬರ್ 20 ರಂದು ನಿಮ್ಮ ಹೋಟೆಲ್‌ಗೆ ಭೇಟಿ ನೀಡಿದ್ದೆವು. ನಮಗೆ ಯಾವುದೇ ಬದಲಾವಣೆಗಳು ಕಾಣಿಸಿಲ್ಲ ಎಂದು ಬಿಎಂಸಿ ಸೋನು ಸೂದ್‌ಗೆ ನೀಡಿರುವ ನೊಟೀಸ್‌ನಲ್ಲಿ ತಿಳಿಸಲಾಗಿದೆ..
ಇದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ಜುಹುನಲ್ಲಿರುವ ನನ್ನ ಶಕ್ತಿ ಸಾಗರ್ ಬಿಲ್ಡಿಂಗ್ ಅನ್ನು ಈಗಾಗಲೇ ವಾಸಯೋಗ್ಯ ಮನೆಯಂತೆ ಬದಲಾವಣೆ ಮಾಡಿದ್ದೇವೆ. ನಿಯಮದ ಪ್ರಕಾರ ಕೆಲವು ಬದಲಾವಣೆಗಳನ್ನು ಸಹ ನಾವು ಈಗಾಗಲೇ ಮಾಡಿದ್ದೇವೆ. ಹಾಗೂ ಆ ಮಾಹಿತಿಯನ್ನು, ದಾಖಲೆಯನ್ನು ಬಿಎಂಸಿ ಜೊತೆಗೆ ನಾವು ಈಗಾಗಲೇ ಹಂಚಿಕೊಂಡಿದ್ದೇವೆ. ನಮಗೆ ಅನುಮತಿ ನೀಡಲಾಗಿರುವ ಯೋಜನೆಯಂತೆ ಆ ಕಟ್ಟಡವು ರೆಸಿಡೆನ್ಶಿಯಲ್ ಬಿಲ್ಡಿಂಗ್ ಆಗಿಯೇ ಇರಲಿದೆ ಎಂದಿದ್ದಾರೆ.