ರಿಷಬ್ ಶೆಟ್ಟಿ ನಿರ್ಮಾಣದ ಪೆದ್ರೋ ಟ್ರೇಲರ್ ರಿಲೀಸ್….
ರಿಷಬ್ ಶೆಟ್ಟಿ ನಿರ್ಮಾಣದ ಪೆದ್ರೋ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಟ್ರೇಲರ್ ನೋಡಿದ ನಂತರ ನಿಮಗೂ ಕೂಡ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಾಗುತ್ತದೆ.
ನಟ ರಿಷಬ್ ಶೆಟ್ಟಿ ಅವರು ತಮ್ಮದೇ ಆದ ಸಿನಿಮಾ ನಿರ್ಮಾಣ ಸಂಸ್ಥೆಯನ್ನ ಹೊರತಂದಿದ್ದಾರೆ. ‘ರಿಷಬ್ ಶೆಟ್ಟಿ ಫಿಲ್ಮ್ಸ್ ಎನ್ನುವ ನಿರ್ಮಾಣ ಸಂಸ್ಥೆ ಮೂಲಕ ಪ್ರಯೋಗಾತ್ಮಕ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ಈ ಮೂಲಕ ವಿಭಿನ್ನ ಸಿನಿಮಾಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಈಗ ಯುವ ನಿರ್ದೇಶಕ ನಟೇಶ್ ಹೆಗಡೆ ನಿರ್ದೇಶನದ ‘ಪೆದ್ರೊ’ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದಾರೆ.
ಗೋಪಾಲ್ ಹೆಗಡೆ, ರಾಮಕೃಷ್ಣ ಭಟ್ ದಂಡಿ, ರಾಜ್ ಬಿ. ಶೆಟ್ಟಿ, ಮೇದಿನಿ ಕೆಳಮನೆ, ನಾಗರಾಜ್ ಹೆಗಡೆ ಮೊದಲಾದವರು ‘ಪೆದ್ರೊ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರಲ್ಲಿ ಬಹುತೇಕ ಕಲಾವಿದರು ಸ್ಥಳೀಯರು. ನಿರ್ದೇಶಕ ನಟೇಶ್ ಅವರ ತಂದೆ ಗೋಪಾಲ್ ಹೆಗಡೆ ಅವರು ಪೆದ್ರೊ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಹಿನ್ನಲೆ ಇಲ್ಲದೆ ನಟನೆ ಕಲಿಯದೆಯೂ ಉತ್ತಮವಾಗಿ ಅಭಿನಯಿಸಿದ್ದಾರೆ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿದೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಮೂಲಕ ಪ್ರೇಕ್ಷಕರಿಂದ ಗುರುತಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಿಷಬ್, ‘ಪೆದ್ರೊ ಟ್ರೇಲರ್ ಬಿಡುಗಡೆಯಾಗಿದೆ. ನಮ್ಮ ಪರಿಶ್ರಮದ ಫಲ ನಿಮ್ಮ ಮುಂದೆ. ನಮ್ಮ ತಲೆಮಾರಿನ ಉತ್ಕೃಷ್ಟ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿಮಾರನ್ರವರು ನಮ್ಮ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಶೀಘ್ರವೇ ಈ ಸಿನಿಮಾ ರಿಲೀಸ್ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ.