ಜೇಮ್ಸ್: ಈ ರೀತಿ ಪ್ರಚಾರ ಯಾವ ಕಲಾವಿದರಿಗೂ ಬರಬಾರದು – ಚಿಕ್ಕಣ್ಣ
ನಿನ್ನೆ ನಡೆದ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರಸ್ ಮೀಟ್ ನಲ್ಲಿ ಅಪ್ಪು ಜೊತೆ ಸಹ ನಟರಾಗಿ ನಟಿಸಿದ್ದ ನಟರೆಲ್ಲರು ಬಂದು ಚಿತ್ರದ ಕುರಿತು ಮತ್ತು ಅಪ್ಪು ಒಡನಾಟಗಳನ್ನ ಮೆಲುಕು ಹಾಕಿಕೊಂಡರು.
‘ಜೇಮ್ಸ್’ ಚಿತ್ರದಲ್ಲಿ ಚಿಕ್ಕಣ್ಣ, ಹರ್ಷ, ತಿಲಕ್ ಶೇಖರ್ ಅವರು ಹೀರೋ ಫ್ರೆಂಡ್ಸ್ ಪಾತ್ರ ಮಾಡಿದ್ದಾರೆ. ಈ ಮೂವರು ಒಟ್ಟಿಗೆ ವೇದಿಕೆಗೆ ಬಂದು ತಮ್ಮ ಮಾತುಗಳನ್ನು ಹಂಚಿಕೊಂಡರು.
‘ ‘ನಟಸಾರ್ವಭೌಮ’, ‘ದೊಡ್ಮನೆ ಹುಡುಗ’ ರಾಜಕುಮಾರ’, ಸಿನಿಮಾದಲ್ಲಿ ಅಪ್ಪು ಜೊತೆ ಚಿಕ್ಕಣ್ಣ ನಟಿಸಿದ್ದರು. ಈಗ ‘ಜೇಮ್ಸ್’ ಚಿತ್ರದಲ್ಲೂ ಹೀರೋ ಸ್ನೇಹಿತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುದ್ದಿಗೋಷ್ಠಿ ವೇಳೆ ಚಿಕ್ಕಣ್ಣ ಭಾವುಕರಾಗಿ ಮಾತನಾಡಿದರು. ಪುನೀತ್ ರಾಜ್ಕುಮಾರ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು. ‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’ ಎಂದು ಚಿಕ್ಕಣ್ಣ ನೊಂದುಕೊಂಡರು.
‘ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು. ಪುನೀತ್ ಅವರ ಕೊನೇ ಸಿನಿಮಾದಲ್ಲಿ ನಾವು ಇದ್ದೇವೆ ಅನ್ನೋದನ್ನು ಅದೃಷ್ಟ ಅಂದುಕೊಳ್ಳುತ್ತೇವೆ. ಈ ಸಿನಿಮಾದಿಂದ ನಮ್ಮ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಆಗಲಿದೆ. ಈ ಮಾತನ್ನು ನಾನೊಬ್ಬನೇ ಹೇಳುತ್ತಿಲ್ಲ. ಅಪ್ಪು ಸರ್ ಅಭಿಮಾನಿಗಳು ಮತ್ತು ಅಭಿಮಾನಿಗಳಲ್ಲದವರು ಕೂಡ ಇದನ್ನೇ ಹೇಳುತ್ತಿದ್ದಾರೆ. ದೇವರು ಈ ಚಿತ್ರಕ್ಕೆ ಒಳ್ಳೆಯದು ಮಾಡಲಿ’ ಎಂದು ಚಿಕ್ಕಣ್ಣ ಹೇಳಿದರು.