Puneeth Rajkumar : ಶಾಲಾ ಪಠ್ಯದಲ್ಲಿ ಪುನೀತ್ ರಾಜ್ ಕುಮಾರ್ ಪಾಠ..!!
ಕರುನಾಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಿನಿಮಾರಂಗದಲ್ಲಿ ಅಷ್ಟೇ ಸಾಧನೆ ಮಾಡಿಲ್ಲ.. ಎಷ್ಟೇ ದೊಡ್ಡ ಸ್ಟಾರ್ ಆದ್ರೂ ವಿನಯದಿಂದ ಪ್ರತಿಯೊಬ್ಬರ ಜೊತೆಗೂ ನಡೆದುಕೊಳ್ತಿದ್ದ ಸಹೃದಯಿ , ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಾ ಮಾದರಿಯಾಗಿದ್ದವರು.. ಇಂದು ನಮ್ಮೊಂದಿಗಿಲ್ಲ ಎನ್ನುವ ಕಹಿ ಸತ್ಯ ಅರಿಗಿಸಿಕೊಳ್ಳಲು ಕಷ್ಟ..
ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರ ಕಣ್ಮಣಿಯಾಗಿ ರಾರಾಜಿಸಿ ಇತ್ತೀಚೆಗಷ್ಟೆ ನಿಧನ ಹೊಂದಿರುವ ಪುನೀತ್ ರಾಜ್ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಪ್ರಶಸ್ತಿ ಪಡೆಯುವುದರ ಜತೆಗೆ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಜರಾಮರ ಸೇವೆ ಸಲ್ಲಿಸುವ ಮೂಲಕ ಮಕ್ಕಳು ಮತ್ತು ಯುವಕರಿಗೆ ಸ್ಪೂರ್ತಿಯಾಗಿರುವ ಪುನೀತ್ ಅವರ ಜೀವನ ಗಾಥೆ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಅವರ ಪಠ್ಯವನ್ನು ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಅಳವಡಿಕೆ ಮಾಡಬೇಕು ಎಂದು ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿಯ ಶಿಕ್ಷಣ ವಿಭಾಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದವು.
ಬಿಬಿಎಂಪಿ ಶಿಕ್ಷಣ ಇಲಾಖೆಗೆ ಬಂದಿದ್ದ ಸಂಘ-ಸಂಸ್ಥೆಗಳ ಮನವಿಯನ್ನು ಪಾಲಿಕೆ ಅಧಿಕಾರಿಗಳು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದರು. ಎನ್.ಆರ್.ರಮೇಶ್ ಹಾಗೂ ಬಿಬಿಎಂಪಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ಅವರ ಬದುಕನ್ನು ಪಠ್ಯವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಾಗೇಶ್ ಅವರು ಭರವಸೆ ನೀಡಿದ್ದಾರೆ.