ಬಿಎಸ್ ವೈ ಬಳಿಕ ತನುಜಾ ಸಿನಿಮಾಗಾಗಿ ಬಣ್ಣ ಹಚ್ಚಿದ ಸುಧಾಕರ್
ನೈಜ ಘಟನೆಗಳನ್ನ ಆಧರಿಸಿ ತಯಾರಾಗುತ್ತಿರುವ ತನುಜಾ ಸಿನಿಮಾದಲ್ಲಿ ಇತ್ತೀಚಗಷ್ಟೇ ಮಾಜಿ ಸಿಎಂ ಯಡಿಯೂರಪ್ಪನವರು ನಟಿಸಿದ್ದು ಸುದ್ದಿಯಾಗಿತ್ತು. ಇದೀಗ ಸಚಿವ ಡಾ.ಕೆ ಸುಧಾಕರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಿ ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ.
ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ ಸಹಾಯ ಕೋರಿದ್ದಳು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ , ಸಚಿವ ಡಾ.ಕೆ ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಇನ್ನಿತರರು ಸಹಾಯ ಮಾಡಿದ್ದರು. ಇವರ ಸಹಾಯದಿಂದ ಪರೀಕ್ಷೆ ಬರೆದ ತನುಜಾ ವೈದ್ಯಕೀಯ ಸೀಟು ಪಡೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಳು. ಈ ನೈಜ ಘಟನೆ ಈಗ ಸಿನಿಮಾ ಆಗಿ ಮೂಡಿ ಬರುತ್ತಿದೆ. ಸಿನಿಮಾಗೆ ತನುಜಾ ಎಂದು ನಾಮಕರಣ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ತಮ್ಮ ಪಾತ್ರಕ್ಕೆ ತಾವೇ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಸಚಿವರಾದ ಡಾ.ಕೆ ಸುಧಾಕರ್ ಅವರು ಕೂಡ ಇಂದು ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನುಭವಿ ಕಲಾವಿದರ ರೀತಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ಅದ್ಭುತವಾಗಿ ನಟಿಸಿದ್ದಾರೆ. ಒಂದೇ ಟೇಕಿಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡದವರಿಗೆ ಖುಷಿ ಕೊಟ್ಟಿದೆ.
ಇನ್ನು ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರ ನಿರ್ದೇಶನವಿದೆ. ತಾರಾಗಣದಲ್ಲಿ ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಇನ್ನಿತರರು ಅಭಿನಯಿಸಿದ್ದಾರೆ.