ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಪ್ರಭಾಸ್ ನಟನೆಯ ಸಲಾರ್ ಟೀಸರ್
ರಾಧೆ ಶ್ಯಾಮ್ ಸೋಲಿನ ಬಳಿಕ ಪ್ರಭಾಸ್ ಅಭಿಮಾನಿಗಳ ಕಣ್ಣು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮೇಲೆ ಬಿದ್ದಿದೆ. ಕೆಜಿಎಫ್ 2 ಚಿತ್ರ ಬಿಡುಗಡೆಯಾದ ಬಳಿಕವಂತೂ ನೀಲ್ ಅವರ ಎಲಿವೇಷನ್ ದೃಶ್ಯಗಳನ್ನ ಕಲ್ಪಿಸಿಕೊಂಡು ಪ್ರಭಾಸ್ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಅಭಿಮಾನಿಗಳ ಈ ಕನಸು ನನಸಾಗುವ ಸಮಯ ಬಂದಿದೆ.
ಸಲಾರ್ ಚಿತ್ರತಂಡದಿಂದ ಬಂದ ಇತ್ತೀಚಿನ ಮಾಹಿತಿ ಪ್ರಕಾರ, ಶೀಘ್ರದಲ್ಲೇ ಪ್ರಭಾಸ್ ಅಭಿಮಾನಿಗಳು ಚಿತ್ರದ ಟೀಅರ್ ಅನ್ನ ಕಣ್ತುಂಬಿಕೊಳ್ಳಬಹುದು. ಸಲಾರ್ ಚಿತ್ರತಂಡ ಮುಂದಿನ ಮೇ ತಿಂಗಳ ಕೊನೆಯ ವಾರದಲ್ಲಿ ಟೀಸರ್ ಅನ್ನ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಳ್ಳುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ಹಣ ಹೂಡುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಲಾರ್ ಚಿತ್ರದ ಕಥಾಹಂದರವನ್ನು ಎರಡು ಭಾಗಗಳಾಗಿ ಪರಿವರ್ತಿಸುವ ಸಾಮರ್ಥ್ಯವಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಒಮ್ಮೆ ಹೇಳಿದರು. ಕೆಜಿಎಫ್ ರೀತಿಯಲ್ಲಿವೇ ಈ ಚಿತ್ರ ಕೂಡ ಎರಡು ಭಾಗಗಳಲ್ಲಿ ಬರುತ್ತೆ ಎನ್ನುವ ಟಾಕ್ ಹಬ್ಬಿದೆ ಆದರೆ ಈ ಕುರಿತು ಚಿತ್ರತಂಡ ಇನ್ನೂ ತುಟಿಬಿಚ್ಚಿಲ್ಲ.
ಈ ಚಿತ್ರವನ್ನ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗುತ್ತಿದೆ. ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಡಬ್ಬಿಂಗ್ ಮೂಲಕ ಬಿಡುಗಡೆಯಾಗಲಿದೆ. ರವಿ ಬಸ್ರೂರ್ ಚಿತ್ರಕ್ಕೆ ಟ್ಯೂನ್ ನೀಡುತ್ತಿದ್ದು, ಭುವನ್ ಗೌಡ ಕ್ಯಾಮೆರಾ ವರ್ಕ್ ನೋಡಿಕೊಳ್ಳುತ್ತಿದ್ದಾರೆ.