ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಅಧಿಕೃತವಾಗಿ ಆರಂಭಗೊಂಡಿದೆ. 75ನೇ ವರ್ಷದ ಅಂತರಾಷ್ಟ್ರೀಯ ಕೇನ್ಸ್ ಚಲನಚಿತ್ರೋತ್ಸವ ಫ್ರಾನ್ಸ್ ನಲ್ಲಿ ನಡೆಯುತ್ತಿದೆ.. ಮಂಗಳವಾರದಿಂದ ಮೇ 28ರವರೆಗೆ ಉತ್ಸವ ನಡೆಯಲಿದೆ. ದೀಪಿಕಾ ಪಡುಕೋಣೆ, ಊರ್ವಶಿ ರೌಟೇಲಾ, ತಮನ್ನಾ ಭಾಟಿಯಾ, ಎಆರ್ ರೆಹಮಾನ್, ಪೂಜಾ ಹೆಗ್ಡೆ ಸೇರಿದಂತೆ ಹಲವು ಭಾರತೀಯ ಸೆಲೆಬ್ರಿಟಿಗಳು ಉದ್ಘಾಟನಾ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದು ಬೆರಗುಗೊಳಿಸಿದರು.
ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗ ಸಂಭ್ರಮದಲ್ಲಿದೆ. ಕೇನ್ಸ್ ಚಿತ್ರೋತ್ಸವದಲ್ಲಿ ಭಾರತವನ್ನು ಮೊದಲ ಬಾರಿಗೆ ‘ಗೌರವದ ದೇಶ’ ಎಂದು ಆಯ್ಕೆ ಮಾಡಲಾಗಿದೆ. ಈ ಬಾರಿಯ ಚಿತ್ರೋತ್ಸವದ ತೀರ್ಪುಗಾರರಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ದೀಪಿಕಾ ನಟಿ ಬ್ಲಾಕ್ ಅಂಡ್ ಗೋಲ್ಡನ್ ಸೀರೆಯನ್ನು ಧರಿಸಿ ಮಿಂಚಿದರು.
ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಗೌರವ ದೇಶವಾಗಿ ಭಾರತದಿಂದ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ. ನಿಯೋಗದಲ್ಲಿ ಎಆರ್ ರೆಹಮಾನ್, ಪೂಜಾ ಹೆಗ್ಡೆ, ಶೇಖರ್ ಕಪೂರ್, ಪ್ರಸೂನ್ ಜೋಶಿ, ಮೇಮ್ ಖಾನ್ ಮತ್ತು ರಿಕಿ ಕೇಜ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಒಟ್ಟು 12 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಸಿನಿ ಜಗತ್ತಿನ ಅನೇಕ ಗಣ್ಯರು ಭಾಗಿಯಾಗಲಿದ್ದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಲಿದ್ದಾರೆ.