ಟೀಸರ್, ಟ್ರೇಲರ್ ಹಾಗೂ ಕ್ರಿಯೇಟಿವ್ ವೀಡಿಯೋಗಳ ಮೂಲಕ ಗಮನ ಸೆಳೆದಿರುವ ಯುವ ಪ್ರತಿಭೆಗಳ ‘ಕಟಿಂಗ್ ಶಾಪ್’ ಸಿನಿಮಾ ಮೇ 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಇದೇ ಮೊದಲ ಬಾರಿಗೆ ಎಡಿಟರ್ (ಸಿನಿಮಾ ಸಂಕಲನಕಾರ) ಬದುಕು–ಬವಣೆಗಳನ್ನು ತೆರೆಯ ಮೇಲೆ ತಂದಿರುವ ಸಿನಿಮಾ ಇದಾಗಿದೆ.
‘ಸಿಂಪಲ್’ ಸುನಿ ಬಳಿ ಕೆಲವು ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿರುವ ಪವನ್ ಭಟ್ ‘ಕಟಿಂಗ್ ಶಾಪ್’ ಸೂತ್ರಧಾರಿ. ಅವರ ಸಹೋದರ ಕೆ.ಬಿ.ಪ್ರವೀಣ್ ಚಿತ್ರದ ಪ್ರಮುಖ ಪಾತ್ರಧಾರಿ. ಪವನ್ ನಿರ್ದೇಶನದ ಜತೆಗೆ ಸಾಹಿತ್ಯ ಹಾಗೂ ಸಂಭಾಷಣೆ ರಚಿಸಿದರೆ, ಪ್ರವೀಣ್ ಬಣ್ಣ ಹಚ್ಚುವುದರ ಜತೆ ಜತೆಗೆ ಸಂಗೀತ ಮತ್ತು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ.
‘ಇದು ಎಲ್ಲರಿಗೂ ಕನೆಕ್ಟ್ ಆಗುವಂಥ ಕಥೆ. ನಾಯಕನಿಗೆ ಹಲವಾರು ತೊಂದರೆ, ತೊಳಲಾಟಗಳಿದ್ದರೂ, ಪ್ರೇಕ್ಷಕರಿಗೆ ಸಖತ್ ಮನರಂಜನೆ ಒದಗಿಸುತ್ತದೆ. ಹೀರೋಯಿಸಂ, ಅನಗತ್ಯ ಬಿಲ್ಡಪ್ ಇತ್ಯಾದಿಗಳಿಲ್ಲದ ಒಂದು ಸುಂದರ ಮನರಂಜನಾತ್ಮಕ ಸಿನಿಮಾ. ಕೊಟ್ಟ ಕಾಸಿಗೆ ಮೋಸವಂತೂ ಆಗುವುದಿಲ್ಲ. ಕಂಪ್ಲೀಟ್ ಎಂಟರ್’ಟೇನ್ಮೆಂಟ್ ಪ್ಯಾಕೇಜ್ ಈ ಸಿನಿಮಾದಲ್ಲಿದೆ’ ಅನ್ನೋದು ನಿರ್ದೇಶಕ ಪವನ್ ಭಟ್ ಅನಿಸಿಕೆ.
ಯಂಗ್ ಥಿಂಕರ್ಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕೆ.ಉಮೇಶ್ ಹಾಗೂ ಗಣೇಶ್ ಕೆ ಐತಾಳ್ ಜಂಟಿಯಾಗಿ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಭಗವಾನ್, ನವೀನ್ ಕೃಷ್ಣ, ಓಂ ಪ್ರಕಾಶ್ ರಾವ್, ಕಾರ್ತಿಕ್ ಕೊರ್ಡೇಲ್ (ರಂಗಿತರಂಗ) ಅರ್ಚನಾ ಕೊಟ್ಟಿಗೆ, ವತ್ಸಲಾ ಮೋಹನ್, ದೀಪಕ್ ಭಟ್ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.