ಸಂತೂರ್ ವಾದಕ ಪದ್ಮಶ್ರೀ ಪಂಡಿತ್ ಭಜನ್ ಸೊಪೋರಿ ನಿಧನ
ಖ್ಯಾತ ಸಂತೂರ್ ವಾದಕ ಪದ್ಮಶ್ರೀ ಪಂಡಿತ್ ಭಜನ್ ಸೊಪೋರಿ ಗುರುವಾರ ಗುರುಗ್ರಾಮದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಪಂಡಿತ್ ಭಜನ್ ಸೊಪೋರಿ ಅವರಿಗೆ 74 ವರ್ಷ ವಯಸ್ಸಾಗಿತ್ತು ಮತ್ತು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 1948 ರಲ್ಲಿ ಶ್ರೀನಗರದಲ್ಲಿ ಜನಿಸಿದ ಭಜನ್ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಭಜನ್ ಸೊಪೋರಿಗೆ 1992 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ನಂತರ, ಭಾರತ ಸರ್ಕಾರವು 2004 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಭಜನ್ ಸೊಪೋರಿಯವರು ಸಂತೂರ್ ನುಡಿಸುವ ಕಲೆಯನ್ನ ಕುಟುಂಬದಿಂದಲೇ ಪಡೆದಿದ್ದರು. ಅವರ ಅಜ್ಜ ಎಸ್ಸಿ ಸೊಪೋರಿ ಮತ್ತು ತಂದೆ ಪಂಡಿತ್ ಎಸ್ಎನ್ ಸೊಪೋರಿ ಕೂಡ ಸಂತೂರ್ ವಾದಕರಾಗಿದ್ದರು. ಭಜನ್ ಸಂತೂರ್ ಜೊತೆ ಜೊತೆಗೆ ಹಾಡುಗಾರಿಕೆಯಲ್ಲೂ ನಿಷ್ಣಾತರಾಗಿದ್ದರು. ಅವರು ಸಂಗೀತದೊಂದಿಗೆ ಇಂಗ್ಲಿಷ್ ಸಾಹಿತ್ಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು.
ಇದರ ನಂತರ ಅವರು ವಾಷಿಂಗ್ಟನ್ ವಿಶ್ವವಿದ್ಯಾನಿಲಯದಿಂದ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಸಹ ಅಧ್ಯಯನ ಮಾಡಿದರು. ನಾಲ್ಕು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ
ಸಂಸ್ಕೃತ, ಅರೇಬಿಕ್ ಸೇರಿದಂತೆ ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜಿಸಿದ ಭಾರತದ ಏಕೈಕ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಸೊಪೋರಿ. ದೇಶದ ಏಕತೆಗಾಗಿ ಸೊಪೋರಿ ಹಲವು ಹಾಡುಗಳನ್ನೂ ರಚಿಸಿದ್ದಾರೆ.