ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಬಿಡುಗಡೆಗೆ ದಿನಾಂಕ್ ಫಿಕ್ಸ್ ಆಗಿದೆ. ಇದೇ ವರಮಹಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಹೇಳಿಕೊಂಡಿದೆ.
ನಟ ಜಗ್ಗೇಶ್ ಇತ್ತೀಚಿಗೆ ಸಿಹಿ ಸುದ್ದಿಯ ಮೇಲೆ ಸಿಹಿ ಸುದ್ದಿ ಕೇಳುತ್ತಿದ್ದಾರೆ. ಈಗಾಗಲೇ ರಾಜ್ಯ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈಗ ಒಂದರ ನಂತರ ಮತ್ತೊಂದು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿವೆ.
ವಿಜಯ್ ಪ್ರಸಾದ್ ನಿರ್ದೇಶನದ ಜಗ್ಗೇಶ್ ಅವರ ತೋತಾಪುರಿ ಸಿನಿಮಾ ಇದೇ ಜೂನ್ 10 ರಂದು ತೆರೆ ಕಾಣುತ್ತಿದೆ. ಇದೀಗ ಅವರ ಅಭಿನಯದ ಮತ್ತೊಂದು ಸಿನಿಮಾ ರಾಘವೇಂದ್ರ ಸ್ಟೋರ್ಸ್ ಮೂಲಕ ರಸದೌತಣ ಉಣಬಡಿಸಲು ಬರುತ್ತಿದ್ದಾರೆ.
ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
ಸಾಲು ಸಾಲು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿರುವ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್ 2 ನಂತರ ನಟ ಜಗ್ಗೆಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ತಯಾರಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದು, ಆಗಸ್ಟ್ 5 ರಂದು ಈ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಿದ್ದಾರೆ.
ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ! ಎಂದು ಹೊಂಬಾಳೆ ಫಿಲ್ಮ್ಸ್ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ.