ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು..!!
ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೈ ಜಗದೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜಯರಾಮೇಗೌಡ ಎನ್ನುವವರು ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂನ್ 5 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಟ ಜೈ ಜಗದೀಶ್ ಪ್ರಯಾಣಿಸುತ್ತಿದ್ದಾಗ ಅವರ ಕಾರಿನ ಮೇಲೆ ನೀರಿನ ಬಾಟಲಿ ಬಿದ್ದಿದೆ. ನಂತರ ಬೆಳ್ಳೂರು ಕ್ರಾಸ್ ನಲ್ಲಿ ಜಯರಾಮೇಗೌಡ ಬಸ್ ನಿಂದ ಕೆಳಗೆ ಇಳಿದಿದ್ದಾರೆ.
ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಜೈ ಜಗದೀಶ್ ಕಾರು ನಿಲ್ಲಿಸಿ ಬಸ್ ನಿಂದ ಬಾಟಲಿ ಎಸೆಯುತ್ತೀಯಾ ಎಂದು ಕೆಟ್ಟದಾಗಿ ನಿಂದಿಸಿದರು. ಮಾತಿಗೆ ಮಾತು ಬೆಳೆದ ನಂತರ ಅವರು ನನ್ನ ಮೇಲೆ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಟ್ಟೆ ಹರಿದು, ಕಪಾಳಕ್ಕೆ ಹೊಡೆದಿದ್ದಾರೆ ಎಂದು ಜಯರಾಮೇಗೌಡ ದೂರು ನೀಡಿದ್ದಾರೆ.
ಈ ಕುರಿತು ಜೈಜಗದೀಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ. ಘಟನೆ ಬಗ್ಗೆ ದೂರು ದಾಖಲಾಗಿದ್ದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.