ಲೇಡಿ ಸೂಪರ್ ಸ್ಟಾರ್ ನಯನತಾರಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿ ಹೀಗೆ ಎಲ್ಲಾ ಬಾಷೆಗಳಲ್ಲೂ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಿದ್ದು , ಇಂದಿಗೂ ಬಹುಬೇಡಿಕೆಯ ನಟಿಯರ ಪೈಕಿ ಒಬ್ಬರಾಗಿ ಉಳಿದಿದ್ದಾರೆ..
ಇತ್ತೀಚೆಗೆ ನಯನತಾರಾ ನಿರ್ದೇಶಕ ವಿಘ್ನೇಶ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ದೊಡ್ಡ ಫ್ಯಾಂಡಮ್ ಇದೆ.. ಕೋಟ್ಯಾಂತರ ಅಭಿಮಾನಿಗಳಿದ್ದಾರೆ.. ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಯನತಾರಾ ಅಸಲಿಗೆ ನಟಿಯಾಗಿರದೇ ಹೋಗಿದ್ದರೆ ಅವರು ಇಂದು ಚಾರ್ಟೆಡ್ ಅಕೌಂಟೆಂಟ್ ಆಗಿರಬೇಕಿತ್ತು..
ಹೌದು.. ನಯನತಾರಾ ತಮಿಳು, ತೆಲುಗು ಮತ್ತು ಮಲಯಾಳಂ ಮತ್ತು ಕನ್ನಡ ಸೇರಿದಂತೆ ಸುಮಾರು 75 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ನಯನತಾರಾ ಜನಿಸಿದ್ದು ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಅವರ ತಂದೆ ವಾಯುಪಡೆಯಲ್ಲಿದ್ದರು. ಅವರ ನಿವೃತ್ತಿಯ ನಂತರ ಕುಟುಂಬ ಕೇರಳದಲ್ಲಿ ನೆಲೆಸಿತು. ನಯನತಾರ ತಮ್ಮ ಕಾಲೇಜು ಶಿಕ್ಷಣವನ್ನ ಕೇರಳದಲ್ಲಿ ಮುಂದುವರೆಸಿದರು ಆದರೆ ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈ, ಜಾಮ್ನಗರ, ದೆಹಲಿ ಮತ್ತು ಗುಜರಾತ್ನ ಶಾಲೆಗಳಲ್ಲಿ ಪಡೆದುಕೊಂಡರು.
ನಯನತಾರಾ ಕಾಲೇಜು ಓದುವಾಗ 2003 ರಲ್ಲಿ ಮಲಯಾಳಂ ಚಿತ್ರ ಮನಸಿಂಕರೆ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 2005 ರಲ್ಲಿ ತೆರೆಕಂಡ ಅಯ್ಯ ಚಿತ್ರದ ಮೂಲಕ ತಮಿಳು ಮತ್ತು 2006 ತೆರೆಕಂಡ ಲಕ್ಷ್ಮಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಯನತಾರಾ ನಟಿಸುವ ಮೊದಲು ಸಿಎ ಆಗಬೇಕೆಂದು ಬಯಸಿದ್ದರಂತೆ, ಆದರೆ ಚಿತ್ರರಂಗದಲ್ಲಿ ತೊಡಗಿಸಿಕೊಂಡ ನಂತರ ಕನಸನ್ನ ಕೈ ಬಿಟ್ಟಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಹೆಸರು ಮಾಡಿದ ನಂತರ ನಯನತಾರಾ 2010 ರಲ್ಲಿ ಸೂಪರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಅದೇ ಸಮಯದಲ್ಲಿ, ಶ್ರೀ ರಾಮ ರಾಜ್ಯಂ ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ನಯನತಾರಾ ಅವರಿಗೆ ಅತ್ಯುತ್ತಮ ತೆಲುಗು ನಟಿ ಪ್ರಶಸ್ತಿಯನ್ನು ಒಲಿದುಬಂದಿತ್ತು..
ನಯನತಾರಾ ಲವ್ ಲೈಫ್ ಕೂಡ ಸದಾ ಚರ್ಚೆಯಲ್ಲಿರುತ್ತದೆ. ನಟಿಯ ಹೆಸರು ಈ ಹಿಂದೆ ನಿರ್ದೇಶಕ ಮತ್ತು ನಟ ಸಿಲಂಬರಸನ್ ಸಿಂಬು ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಅವರಿಬ್ಬರೂ 2006ರಲ್ಲಿ ಬ್ರೇಕಪ್ ಮಾಡಿಕೊಂಡರು. ನಂತರ 2008 ರಲ್ಲಿ ಅವರ ಹೆಸರು ಪ್ರಭುದೇವ ಅವರ ಜೊತೆ ಕೇಳಿಬಂದಿತ್ತು.. 2009 ರಲ್ಲಿ ಇಬ್ಬರೂ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದವು. ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ನಯನತಾರಾ 2011 ರಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಕಾರಣಕ್ಕೆ ತಮ್ಮ ಹೆಸರನ್ನ ಕೂಡ ಬದಲಾಯಿಸಿಕೊಂಡಿದ್ದರು.
ಇನ್ಫಿನಿಟಿ ನೆಟ್ವರ್ತ್ ವೆಬ್ಸೈಟ್ ಪ್ರಕಾರ, ನಟಿಯ ನಿವ್ವಳ ಮೌಲ್ಯ ಸುಮಾರು $ 22 ಮಿಲಿಯನ್ (ಸುಮಾರು 171 ಕೋಟಿ ರೂ.). ನಯನತಾರಾ ಪ್ರತಿ ಚಿತ್ರಕ್ಕೆ ಸುಮಾರು 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ..