ಕನ್ನಡ , ತಮಿಳು , ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ನಿಧನ ಹೊಂದಿದ್ದಾರೆ..
ಅನಾರೋಗ್ಯದ ಹಿನ್ನೆಲೆ ವಿದ್ಯಾಸಾಗರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ವಿದ್ಯಾಸಾಗರ್ ಅವರು ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಜನವರಿಯಲ್ಲಿ ಕುಟುಂಬ ಕೋವಿಡ್ 19 ಪರೀಕ್ಷೆ ನಡೆಸಿತ್ತು. ಈ ವೇಳೆ ಸೋಂಕು ಕಾಣಿಸಿಕೊಂಡಿತ್ತಾದ್ರೂ ವಿದ್ಯಾಸಾಗರ್ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು.
ಆದರೆ ಸೋಂಕು ಮತ್ತೆ ಕಾಣಿಸಿಕೊಂಡಿದೆ. ಕೆಲವು ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗಲಿಲ್ಲ ಎಂದು ತಿಳಿದುಬಂದಿದೆ.
ವಿದ್ಯಾಸಾಗರ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದವರು ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ.
ಬೆಂಗಳೂರು ಮೂಲದ ವಿದ್ಯಾಸಾಗರ್ ಅವರ ಜೊತೆಗೆ 2009ರಲ್ಲಿ ನಟಿ ಮೀನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ವಿದ್ಯಾ ಸಾಗರ್ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಇವರು ವಿವಾಹದ ನಂತರ ಚೆನ್ನೈನಲ್ಲಿ ನೆಲೆಸಿದ್ದರು.